ಬೆಂಗಳೂರು : ರಾಜ್ಯ ಕಾಂಗ್ರೆಸ್ ವಲಯದಲ್ಲಿ ಮುಖ್ಯಮತ್ರಿ ಕುರ್ಚಿಗೆ ಗದ್ದುಗೆ ಗುದ್ದಾಟ ನಡೆಯುತ್ತಿದ್ದು ಇದೀಗ ಬಣ ರಾಜಕೀಯ ನಾಯಕರ ದಿನಕ್ಕೊಂದು ನೀಡುವ ಹೇಳಿಕೆ ರಾಜಕೀಯ ವಲಯದಲ್ಲಿ ತಲ್ಲಣವಾಗುತ್ತಿದೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ ಎಂಬ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಹೇಳಿಕೆಯ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಸುಮಾರು 20 ನಿಮಿಷಗಳ ಕಾಲ ಚರ್ಚಿಸಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಅಧಿಕಾರ ಹಂಚಿಕೆ ವಿಚಾರವಾಗಿ ಗೊಂದಲ ಮೂಡಿದ್ದು, ಡಿ.ಕೆ. ಶಿ ಕಾಂಗ್ರೆಸ್ ತೊರೆಯುತ್ತಾರೆ ಎಂಬ ಊಹಾಪೋಹಗಳೂ ಹರಿದಾಡಿದ್ದವು. ಈ ಎಲ್ಲದರ ಮಧ್ಯೆ ವೀರಪ್ಪ ಮೊಯ್ಲಿ ಹೇಳಿಕೆ ಕಾಂಗ್ರೆಸ್‌ನಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಎಲ್ಲದೂ ಹೈ ಕಮಾಂಡ್ ಗಮನಿಸುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲ ನಾಯಕರೂ ಹೇಳಿದ್ದರು. ಇದರ ನಡುವೆ ಇದೀಗ ಎಐಸಿಸಿ ಅಧ್ಯಕ್ಷ ಮತ್ತು ಡಿ.ಕೆ. ಶಿವಕುಮಾರ್ ಅವರ ಅರ್ಧತಾಸಿನ ಮಾತುಕತೆ ಚರ್ಚೆಗೆ ಗ್ರಾಸವಾಗಿದೆ.
ನಾನು ಕುಂಭಮೇಳಕ್ಕೆ ಹೋಗಿದ್ದು, ಶಿವರಾತ್ರಿಯಂದು ಸದ್ಗುರುಗಳ ಆಹ್ವಾನದ ಮೇರೆಗೆ ಕೊಯಮತ್ತೂನ ಇಶಾ ಫೌಂಡೇಶನ್‌ಗೆ ತೆರಳಿರುವುದು ಇದಾದ ನಂತರದ ಬೆಳವಣಿಗೆಗಳು ನನ್ನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿವೆ. ಅಲ್ಲದೇ ನಮ್ಮದೇ ಪಕ್ಷದ ನಾಯಕರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿ ಇದಕ್ಕೆ ನೀವೇ ಪರಿಹಾರ ಕಂಡು ಹಿಡಿಯಬೇಕು ಎಂದು ಚರ್ಚೆವೇಳೆ ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿಳಿಸಿದರೆಂದು ಹೇಳಲಾಗುತ್ತಿದೆ.ಒಟ್ಟಿನಲ್ಲಿ ರಾಜ್ಯರಾಜಕೀಯದಲ್ಲಿ ಅದಿಕಾರಗೊಸ್ಕರ ಕಸರತ್ತು ನಡೆಯುತ್ತಿರುವುದಂತೂ ನಿಜವಾದ ಸಂಗತಿ ಎಂಬುದು ಜನಸಾಮನ್ಯರಿಗೆ ತಿಳಿದ ವಿಚಾರವಾಗಿದೆ.