ಪುತ್ತೂರು : ಪುತ್ತೂರಿನ ದರ್ಬೆಯ ಡಿಜಿಟಲ್ ಸೇವಾ ಕೇಂದ್ರವೊಂದರಲ್ಲಿ ಸಿಬ್ಬಂದಿ ಹಾಗೂ ಗ್ರಾಹಕಿ ನಡುವೆ ನಡೆದ ಮಾತಿನ ಚಕಮಕಿ ಬಳಿಕ ಎರಡೂ ಕಡೆಯವರ ಬೆಂಬಲಿಗರು ಗುಂಪುಗೂಡಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಘಟನೆ ಆ.21ರಂದು ಶುಕ್ರವಾರ ಸಂಜೆ ನಡೆದಿದೆ.

ಡಿಜಿಟಲ್ ಸೇವಾ ಕೇಂದ್ರಕ್ಕೆ ಜೆರಾಕ್ಸ್ ಮಾಡಿಸಲು ಬಂದಿದ್ದ ಮಹಿಳಾ ಗ್ರಾಹಕಿ ಹಾಗೂ ಕೇಂದ್ರದ ಮಹಿಳಾ ಸಿಬ್ಬಂದಿ ನಡುವೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಬಳಿಕ ವಿಷಯ ತಿಳಿದು ಎರಡೂ ಕಡೆಯವರ ಬೆಂಬಲಿಗರು ಸ್ಥಳದಲ್ಲಿ ಸೇರಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ ಎಂದು ತಿಳಿದುಬಂದಿದೆ.
ಮಾಹಿತಿ ಪಡೆದ ಪುತ್ತೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಲು ಲಾಠಿಚಾರ್ಜ್ ನಡೆಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ನಾಲ್ವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿ ಇತ್ತಂಡಗಳಿಂದಲೂ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

