ನವದೆಹಲಿ : “ಹಿಂದೂ ಧರ್ಮವೆಂಬುದು ಕೇವಲ ಆಚರಣೆಗಳ ಸಮೂಹವಲ್ಲ, ಅದು ಒಂದು ಜೀವನ ವಿಧಾನ” ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಕೇರಳದ ಶಬರಿಮಲೆ ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ಪ್ರವೇಶ, ಧಾರ್ಮಿಕ ಸ್ವಾತಂತ್ರ್ಯ ಹಾಗೂ ವಿವಿಧ ಸಮುದಾಯಗಳ ಆಚರಣೆಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಾಧೀಶರ ಸಂವಿಧಾನ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠದ ಮುಂದೆ ನಡೆದ ವಿಚಾರಣೆಯಲ್ಲಿ, “ಹಿಂದೂ ಆಗಿ ಉಳಿಯಲು ದೇವಸ್ಥಾನಕ್ಕೆ ಹೋಗುವುದು ಅಥವಾ ನಿರ್ದಿಷ್ಟ ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅನಿವಾರ್ಯವಲ್ಲ. ಮನೆಯಲ್ಲಿ ದೀಪ ಹಚ್ಚಿದರೂ ಸಾಕು” ಎಂದು ಪೀಠ ಅಭಿಪ್ರಾಯಪಟ್ಟಿತು.
ವಿಚಾರಣೆ ವೇಳೆ ಮಧ್ಯವರ್ತಿಗಳ ಪರ ವಾದಿಸಿದ ಹಿರಿಯ ವಕೀಲ ಜಿ. ಮೋಹನ್ ಗೋಪಾಲ್, “ಹಿಂದೂತ್ವವನ್ನು ಹಿಂದೆ ಒಂದು ನಿರ್ದಿಷ್ಟ ಧಾರ್ಮಿಕ ವರ್ಗವೆಂದು ಪರಿಗಣಿಸಲಾಗುತ್ತಿತ್ತು. ಆದರೆ 1966ರ ಬಳಿಕ ಸುಪ್ರೀಂ ಕೋರ್ಟ್ ಹಿಂದೂ ಧರ್ಮವನ್ನು ಜೀವನ ಶೈಲಿಯಾಗಿ ವ್ಯಾಖ್ಯಾನಿಸಿತು,” ಎಂದು ಹೇಳಿದರು. ವೇದಗಳನ್ನು ಪರಮ ಜ್ಞಾನವೆಂದು ಒಪ್ಪಿಕೊಳ್ಳುವುದೇ ಹಿಂದೂತನದ ಮಾನದಂಡವಾಗಬೇಕೇ ಎಂಬ ಪ್ರಶ್ನೆಯನ್ನೂ ಅವರು ನ್ಯಾಯಪೀಠದ ಮುಂದೆ ಎತ್ತಿದರು.
ಶಬರಿಮಲೆ ಸೇರಿದಂತೆ ಹಲವು ಅರ್ಜಿಗಳ ವಿಚಾರಣೆ ಪ್ರಸ್ತುತ ಸಂವಿಧಾನ ಪೀಠದ ಮುಂದಿದೆ. ಶಬರಿಮಲೆ ಮಹಿಳಾ ಪ್ರವೇಶ ಪ್ರಕರಣ,ದಾವೂದಿ ಬೊಹ್ರಾ ಸಮುದಾಯದ ಧಾರ್ಮಿಕ ಹಕ್ಕುಗಳು ಧಾರ್ಮಿಕ ಆಚರಣೆ ಮತ್ತು ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ಹಲವು ಅರ್ಜಿಗಳು ವಿಚಾರಣೆಯಲ್ಲಿವೆ.ಈ ಮಹತ್ವದ ಪ್ರಕರಣಗಳ ವಿಚಾರಣೆ 15ನೇ ದಿನಕ್ಕೂ ಮುಂದುವರಿದಿದೆ.


