Monday, September 7, 2026
Homeರಾಜ್ಯತಿಪಟೂರು : ಠಾಣೆ ಎದುರೇ ಕ್ರಿಮಿನಾಶಕ ಸೇವಿಸಿದ ತಂದೆ–ಮಗ ; ಪೊಲೀಸರ ವಿರುದ್ಧ ಆಕ್ರೋಶ.

ತಿಪಟೂರು : ಠಾಣೆ ಎದುರೇ ಕ್ರಿಮಿನಾಶಕ ಸೇವಿಸಿದ ತಂದೆ–ಮಗ ; ಪೊಲೀಸರ ವಿರುದ್ಧ ಆಕ್ರೋಶ.

ತಿಪಟೂರು : ಜಮೀನಿನ ದಾರಿ ವಿಚಾರವಾಗಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ದೂರು ಸ್ವೀಕರಿಸದೆ ಅಲೆದಾಡಿಸಿದ ಆರೋಪದಿಂದ ಮನನೊಂದು ತಂದೆ–ಮಗ ಪೊಲೀಸ್ ಠಾಣೆ ಎದುರೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮದಲ್ಲಿ ನಡೆದಿದೆ.

ನೊಣವಿನಕೆರೆ ನಿವಾಸಿಗಳಾದ ಹುಚ್ಚಪ್ಪ ಹಾಗೂ ಅವರ ಪುತ್ರ ನಾಗರಾಜು ಆತ್ಮಹತ್ಯೆಗೆ ಯತ್ನಿಸಿದವರು. ಜಮೀನಿನ ದಾರಿ ವಿಚಾರವಾಗಿ ಗ್ರಾಮದಲ್ಲಿ ಗಲಾಟೆ ನಡೆದಿದ್ದು, ಈ ಸಂಬಂಧ ನ್ಯಾಯ ಕೋರಿ ನೊಣವಿನಕೆರೆ ಪೊಲೀಸ್ ಠಾಣೆಗೆ ತೆರಳಿದ್ದರು ಎನ್ನಲಾಗಿದೆ. ಆದರೆ ದೂರು ಸ್ವೀಕರಿಸದೆ ವಾಪಸ್ ಕಳುಹಿಸಲಾಗಿದೆ ಎಂದು ಆರೋಪಿಸಿರುವ ಕುಟುಂಬ, ಬಳಿಕ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲೂ ದೂರು ನೀಡಲು ತೆರಳಿತ್ತು. ಅಲ್ಲಿಯೂ ಸೂಕ್ತ ಸ್ಪಂದನೆ ದೊರೆಯದೆ ವಾಪಸ್ ಕಳುಹಿಸಲಾಗಿದೆ ಎನ್ನಲಾಗಿದೆ.

ಇದರಿಂದ ಮನನೊಂದ ತಂದೆ–ಮಗ ನಿನ್ನೆ ಸಂಜೆ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಎದುರೇ ಕ್ರಿಮಿನಾಶಕ ಸೇವಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಇಬ್ಬರೂ ಕುಸಿದುಬಿದ್ದಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಘಟನೆಯ ಹಿನ್ನೆಲೆಯಲ್ಲಿ ಪೊಲೀಸರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ದೂರು ನೀಡಲು ಬಂದ ಸಂತ್ರಸ್ತರ ಅಹವಾಲು ಸ್ವೀಕರಿಸದ ಆರೋಪದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪೊಲೀಸರ ನಿರ್ಲಕ್ಷ್ಯದಿಂದಲೇ ಈ ಘಟನೆ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣದ ಸಂಪೂರ್ಣ ವಿವರ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular