Wednesday, August 19, 2026
Homeಜಿಲ್ಲೆಕಾಸರಗೋಡು : ಮನೆಯ ಕೆಳಗೆ ಭಾರೀ ಸುರಂಗ ಪತ್ತೆ; ಗೃಹಪ್ರವೇಶಕ್ಕೆ ಸಿದ್ಧವಾಗಿದ್ದ ಕುಟುಂಬಕ್ಕೆ ಆತಂಕ.

ಕಾಸರಗೋಡು : ಮನೆಯ ಕೆಳಗೆ ಭಾರೀ ಸುರಂಗ ಪತ್ತೆ; ಗೃಹಪ್ರವೇಶಕ್ಕೆ ಸಿದ್ಧವಾಗಿದ್ದ ಕುಟುಂಬಕ್ಕೆ ಆತಂಕ.

ಕಾಸರಗೋಡು : ಕೇರಳದ ಕಾಸರಗೋಡು ಜಿಲ್ಲೆಯ ಕುಂಡಂಕುಳಿ ಸಮೀಪದ ಆನಕಲ್ಲು ಎಂಬಲ್ಲಿ ನಿರ್ಮಾಣ ಹಂತದ ಮನೆಯೊಂದರ ಕೆಳಗೆ ಭಾರೀ ಗಾತ್ರದ ಆಳವಾದ ಸುರಂಗ ಪತ್ತೆಯಾಗಿದ್ದು, ಕುಟುಂಬದವರಲ್ಲಿ ಆತಂಕ ಮೂಡಿಸಿದೆ.

ಸೆಪ್ಟಿಕ್ ಟ್ಯಾಂಕ್‌ಗಾಗಿ ಗುಂಡಿ ತೋಡುವ ವೇಳೆ ಈ ಸುರಂಗ ಬೆಳಕಿಗೆ ಬಂದಿದೆ. ಮನೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಆಗಸ್ಟ್ 23ರಂದು ಗೃಹಪ್ರವೇಶಕ್ಕೆ ಸಿದ್ಧತೆ ನಡೆಸಲಾಗಿತ್ತು. ಇದೀಗ ಮನೆಯ ಕೆಳಭಾಗದಲ್ಲೇ ಸುರಂಗ ಪತ್ತೆಯಾಗಿರುವುದು ಕುಟುಂಬಕ್ಕೆ ಆಘಾತ ತಂದಿದೆ.

ಮನೆಯ ಕೆಳಭಾಗದಲ್ಲಿ ದೊಡ್ಡ ಕುಳಿ ಕಂಡುಬಂದಿದ್ದು, ಅದರೊಳಗೆ ನೀರು ಹರಿಯುತ್ತಿರುವುದು ಗಮನಕ್ಕೆ ಬಂದಿದೆ. ದಿಢೀರ್ ಭೂಕುಸಿತ ಅಥವಾ ಮನೆಯ ಸುರಕ್ಷತೆಗೆ ಅಪಾಯ ಉಂಟಾಗಬಹುದೇ ಎಂಬ ಆತಂಕ ಮನೆಮಂದಿಯನ್ನು ಕಾಡುತ್ತಿದೆ.

ಸ್ವಾಭಾವಿಕ ಕುಳಿಯೇ ಅಥವಾ ಹಳೆಯ ಸುರಂಗವೇ?.

ಕಾಸರಗೋಡು ಹಾಗೂ ಕಣ್ಣೂರು ಭಾಗಗಳಲ್ಲಿ ಅಂತರ್ಜಲದ ಹರಿವಿನಿಂದ ಮಣ್ಣಿನ ಒಳಭಾಗ ಸವೆದು ದೊಡ್ಡ ಕೊಳವೆ ಅಥವಾ ಸುರಂಗದಂತಹ ಕುಳಿಗಳು ನಿರ್ಮಾಣವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೊಂದೆಡೆ, ಕಾಸರಗೋಡು ಭಾಗದಲ್ಲಿ ಹಿಂದಿನ ಕಾಲದಲ್ಲಿ ನೀರು ಸಂಗ್ರಹಿಸಲು ಕಲ್ಲಿನ ಗುಡ್ಡಗಳಲ್ಲಿ ‘ಸುರಂಗ’ ಕೊರೆಯುವ ಪದ್ಧತಿ ಇದ್ದುದರಿಂದ, ಇದು ಹಳೆಯ ಮಾನವ ನಿರ್ಮಿತ ಸುರಂಗವಾಗಿರಬಹುದೇ ಎಂಬ ಚರ್ಚೆಯೂ ನಡೆಯುತ್ತಿದೆ.

ಪತ್ತೆಯಾಗಿರುವ ರಚನೆ ಸ್ವಾಭಾವಿಕವಾಗಿ ನಿರ್ಮಾಣವಾದುದೇ ಅಥವಾ ಹಳೆಯ ಸುರಂಗವೇ ಎಂಬುದು ತಜ್ಞರ ಪರಿಶೀಲನೆಯ ಬಳಿಕವಷ್ಟೇ ಸ್ಪಷ್ಟವಾಗಬೇಕಿದೆ.

ಸಾಲ ಮಾಡಿ ಮನೆ ನಿರ್ಮಿಸಿರುವ ಕುಟುಂಬಕ್ಕೆ ಗೃಹಪ್ರವೇಶಕ್ಕೂ ಮುನ್ನ ಎದುರಾಗಿರುವ ಈ ಬೆಳವಣಿಗೆ ಆತಂಕಕ್ಕೆ ಕಾರಣವಾಗಿದೆ. ಮನೆಯ ಸುರಕ್ಷತೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ತಜ್ಞರು ಪರಿಶೀಲನೆ ನಡೆಸಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular