ಉಳ್ಳಾಲ : ಇಲ್ಲಿನ ಸೋಮೇಶ್ವರ ಸಮುದ್ರ ತೀರದಿಂದ ವ್ಯಕ್ತಿಯೊಬ್ಬರು ತನ್ನ ಕಾರು ,ಶೂ ಹಾಗೂ ಇನ್ನಿತರ ಸಾಮಾನುಗಳನ್ನು ಬಿಟ್ಟು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ನಾಪತ್ತೆಯಾದ ವ್ಯಕ್ತಿಯನ್ನು ಉಳ್ಳಾಲದ ಧರ್ಮನಗರ ನಿವಾಸಿ ಜಿನ್ನಪ್ಪ ಪೂಜಾರಿ ಎಂಬವರ ಪುತ್ರ ಕಾರು ವ್ಯಾಪಾರಿ ವಸಂತ ಅಮೀನ್ (49) ಎಂದು ಗುರುತಿಸಲಾಗಿದೆ. ಆದರೆ, ರುದ್ರಪಾದೆ, ಸೋಮೇಶ್ವರ ಸಮುದ್ರ ತೀರದಲ್ಲಿ ಅವರ ವ್ಯಾಲೆಟ್, ಮೊಬೈಲ್ ಫೋನ್, ಪಾದರಕ್ಷೆ ಮತ್ತು ಕಾರು ಪತ್ತೆಯಾಗಿದೆ.
ವಸಂತ್ ಉಳ್ಳಾಲದ ಬಸ್ತಿಪಡ್ಪು ಮೂಲದವರಾಗಿದ್ದು, ಕೆಲ ತಿಂಗಳ ಹಿಂದೆ ಧರ್ಮನಗರದಲ್ಲಿ ಮನೆ ನಿರ್ಮಿಸಿಕೊಂಡಿದ್ದರು. ಅವರು ಮದುವೆಯಾಗಿದ್ದಾರೆ ಮತ್ತು ಚಿಕ್ಕ ಮಗಳನ್ನು ಹೊಂದಿದ್ದಾರೆ.
ಎಪ್ರಿಲ್ 26ರ ಬುಧವಾರ ಬೆಳಗ್ಗೆ ಪತ್ನಿಗೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಟು ಹೋಗಿದ್ದು, ಅಲ್ಲಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳೀಯರು ಆತನ ಕಾರನ್ನು ಸೋಮೇಶ್ವರ ಸಮುದ್ರ ತೀರದಲ್ಲಿ ಮತ್ತು ವಾಲೆಟ್, ಮೊಬೈಲ್ ಫೋನ್ ಮತ್ತು ಚಪ್ಪಲಿಯನ್ನು ರುದ್ರಪಾದೆಯಲ್ಲಿ ಪತ್ತೆ ಮಾಡಿದ್ದಾರೆ.
ಪರಿಣಿತ ಈಜುಗಾರರ ಸಹಾಯದಿಂದ ಸಮುದ್ರದಲ್ಲಿ ಆತನಿಗಾಗಿ ಶೋಧಕಾರ್ಯ ನಡೆಯುತ್ತಿದೆ.