Tuesday, May 19, 2026
Flats for sale
Homeಜಿಲ್ಲೆಮಂಗಳೂರು : ಮಂಗಳೂರು ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಮೀನು ಸಾಗಾಟ ವಾಹನಗಳಿಂದ ಸಮಸ್ಯೆ : ಶಾಶ್ವತ...

ಮಂಗಳೂರು : ಮಂಗಳೂರು ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಮೀನು ಸಾಗಾಟ ವಾಹನಗಳಿಂದ ಸಮಸ್ಯೆ : ಶಾಶ್ವತ SOPಗೆ ಸಾರ್ವಜನಿಕರು ಒತ್ತಾಯ.

ಮಂಗಳೂರು : ಕರಾವಳಿ ಭಾಗದಲ್ಲಿ, ವಿಶೇಷವಾಗಿ ದಕ್ಷಿಣ ಕನ್ನಡ ಹಾಗೂ ಮಂಗಳೂರು ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಮೀನು ಸಾಗಾಟ ವಾಹನಗಳಿಂದ ಉಂಟಾಗುತ್ತಿರುವ ಸಮಸ್ಯೆ ಕುರಿತು ಸಾರ್ವಜನಿಕ ವಲಯದಲ್ಲಿ ಮತ್ತೆ ಆತಂಕ ವ್ಯಕ್ತವಾಗಿದೆ. ಸುಮಾರು ಎಂಟು ವರ್ಷಗಳ ಹಿಂದೆ ಮಂಗಳೂರು ಸಂಚಾರ ಪೊಲೀಸರು ಮೀನು ಸಾಗಾಟ ವಾಹನಗಳಿಗೆ ಕಡ್ಡಾಯವಾಗಿ ತ್ಯಾಜ್ಯ ನೀರು ಸಂಗ್ರಹಿಸುವ ಟ್ಯಾಂಕ್ ಅಳವಡಿಕೆ ಹಾಗೂ ಸಂಚಾರದ ವೇಳೆ ವಾಲ್ವ್ ಮುಚ್ಚಿಡುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದರು. ಆದರೆ ನಂತರದ ಅವಧಿಯಲ್ಲಿ ನಿಯಮ ಜಾರಿಗೆ ಶಿಥಿಲತೆ ಕಂಡುಬಂದಿದೆ ಎನ್ನಲಾಗಿದೆ.


ಮೀನು ತ್ಯಾಜ್ಯ ನೀರು ರಸ್ತೆಗಳಿಗೆ ಹರಿಯುವುದರಿಂದ ದುರ್ವಾಸನೆ ಉಂಟಾಗುವುದರ ಜೊತೆಗೆ ರಸ್ತೆ ಜಾರುವ ಸ್ಥಿತಿ ನಿರ್ಮಾಣವಾಗಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ವಿಶೇಷವಾಗಿ ಕೇರಳ ಪ್ರವೇಶಿಸಿದ ಬಳಿಕ ವಾಹನಗಳ ವಾಲ್ವ್‌ಗಳು ಮುಚ್ಚಲ್ಪಡುವುದು ಗಮನಾರ್ಹ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರಕ್ಕಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ರೂಪಿಸಿ, ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಿತ ಎಲ್ಲಾ ಇಲಾಖೆಗಳ ಸಮನ್ವಯದಲ್ಲಿ ಕಟ್ಟುನಿಟ್ಟಿನ ಜಾರಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಜೂನ್ 1ರಿಂದ ಆರಂಭವಾಗಲಿರುವ ಎರಡು ತಿಂಗಳ ಮೀನುಗಾರಿಕಾ ನಿಷೇಧ ಅವಧಿಯನ್ನು ಬಳಸಿಕೊಂಡು, ತ್ಯಾಜ್ಯ ನೀರು ಸಂಗ್ರಹ ಟ್ಯಾಂಕ್ ಇಲ್ಲದ ವಾಹನಗಳಿಗೆ ಅವುಗಳನ್ನು ಕಡ್ಡಾಯವಾಗಿ ಅಳವಡಿಸಲು ಸೂಚನೆ ನೀಡಬೇಕು. ಬಳಿಕ ಮೀನುಗಾರಿಕಾ ಚಟುವಟಿಕೆ ಪುನರಾರಂಭವಾದ ನಂತರ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ಪ್ರತಿ ವರ್ಷವೂ ಇದೇ ಸಮಸ್ಯೆ ಮರುಕಳಿಸದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಶಾಶ್ವತ SOP ರೂಪಿಸಿ ಪರಿಣಾಮಕಾರಿ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular