Tuesday, September 22, 2026
Homeಜಿಲ್ಲೆಉಡುಪಿ : ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಬರ್ಬರ ಹತ್ಯೆ ; ಕಾರಿನ ಡಿಕ್ಕಿಯಲ್ಲಿ 9...

ಉಡುಪಿ : ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಬರ್ಬರ ಹತ್ಯೆ ; ಕಾರಿನ ಡಿಕ್ಕಿಯಲ್ಲಿ 9 ತುಂಡುಗಳಾಗಿ ಮೃತದೇಹ ಪತ್ತೆ.

ಉಡುಪಿ : ದುಬೈನ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯೊಬ್ಬರ ಮೃತದೇಹ ಕಾರಿನ ಡಿಕ್ಕಿಯಲ್ಲಿ 9 ತುಂಡುಗಳಾಗಿ ಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕುಂದಾಪುರ ಮೂಲದ ಪ್ರಕಾಶ್ ಕುಂದರ್ ಮೃತ ವ್ಯಕ್ತಿ ಎಂದು ಡಿಎನ್‌ಎ ಪರೀಕ್ಷೆಯಿಂದ ದೃಢಪಟ್ಟಿದೆ.

ಶಾರ್ಜಾ ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್, ಸುಮಾರು 20 ವರ್ಷಗಳ ಹಿಂದೆ ಉದ್ಯಾವರ ಮೂಲದ ಟೀನಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿರುವ ಪುತ್ರನಿದ್ದಾನೆ ಎನ್ನಲಾಗಿದೆ. ಮೊಬೈಲ್ ಮೆಸೇಜ್‌ನಿಂದ ಕುಟುಂಬಕ್ಕೆ ಅನುಮಾನ ಜುಲೈ 20ರಂದು ಪ್ರಕಾಶ್ ಅವರ ಸಹೋದರ ಪ್ರಶಾಂತ್ ಕುಂದರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಸಾಮಾನ್ಯವಾಗಿ ವಾಯ್ಸ್ ಮೆಸೇಜ್ ಮೂಲಕ ಪ್ರತಿಕ್ರಿಯಿಸುತ್ತಿದ್ದ ಪ್ರಕಾಶ್ ಅವರ ಮೊಬೈಲ್‌ನಿಂದ ಈ ಬಾರಿ ಟೆಕ್ಸ್ಟ್ ಮೆಸೇಜ್ ಬಂದಿದ್ದು ಕುಟುಂಬಸ್ಥರಿಗೆ ಅನುಮಾನ ಮೂಡಿಸಿತ್ತು. ಕರೆ ಮಾಡುವಂತೆ ಒತ್ತಾಯಿಸಿದ ಬಳಿಕ ಸಂಪರ್ಕ ಕಡಿತಗೊಂಡಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಮತ್ತೋರ್ವ ಸಹೋದರ ಶಾರ್ಜಾ ಏರ್‌ಪೋರ್ಟ್‌ನಲ್ಲಿ ಪ್ರಕಾಶ್ ಬಗ್ಗೆ ವಿಚಾರಿಸಿದಾಗ, ಅವರು ಭಾರತಕ್ಕೆ ತೆರಳಿದ್ದಾರೆ ಎಂದು ಕಂಪನಿಯಿಂದ ಮಾಹಿತಿ ದೊರೆತಿತ್ತು ಎನ್ನಲಾಗಿದೆ. ಕಾರಿನ ಡಿಕ್ಕಿಯಲ್ಲಿ 9 ತುಂಡುಗಳಾಗಿ ಮೃತದೇಹ ಇನ್ನೊಂದೆಡೆ ಶಾರ್ಜಾ ಪೊಲೀಸರು ಪ್ರಕಾಶ್ ನಾಪತ್ತೆಯಾಗಿರುವ ಕುರಿತು ತನಿಖೆ ನಡೆಸುತ್ತಿದ್ದ ವೇಳೆ, ಅವರದೇ ಕಾರಿನ ಡಿಕ್ಕಿಯಲ್ಲಿ ಮೃತದೇಹ ಪತ್ತೆಯಾಗಿದೆ. ದೇಹವನ್ನು ಚಾಕುವಿನಿಂದ ಇರಿದು 9 ತುಂಡುಗಳಾಗಿ ಮಾಡಲಾಗಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮೃತದೇಹ ಪ್ರಕಾಶ್ ಅವರದ್ದೇ ಎಂಬುದು ಡಿಎನ್‌ಎ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಸಿಸಿಟಿವಿಯಲ್ಲಿ ಮಹಿಳೆ ಸೇರಿ ಮೂವರು ಪ್ರಕರಣದ ತನಿಖೆ ವೇಳೆ ಸಿಸಿಟಿವಿ ದೃಶ್ಯದಲ್ಲಿ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರು ಚೀಲವೊಂದನ್ನು ಸಾಗಿಸುತ್ತಿರುವ ದೃಶ್ಯ ಸೆರೆಯಾಗಿದೆ ಎನ್ನಲಾಗಿದೆ. ಈ ದೃಶ್ಯವೂ ತನಿಖೆಯಲ್ಲಿ ಮಹತ್ವ ಪಡೆದುಕೊಂಡಿದೆ. ಪ್ರಕಾಶ್ ಅವರ ಪತ್ನಿ ಟೀನಾ ಹಾಗೂ ಪುತ್ರ ದುಬೈನಿಂದ ಭಾರತಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅವರ ಮೇಲೂ ಶಂಕೆ ವ್ಯಕ್ತಪಡಿಸಿದ್ದಾರೆ.

ಟೀನಾಗೆ ಪಾಕಿಸ್ತಾನಿ ವ್ಯಕ್ತಿಯೊಬ್ಬರೊಂದಿಗೆ ಅಕ್ರಮ ಸಂಬಂಧವಿತ್ತು ಎಂಬ ಆರೋಪವೂ ಕೇಳಿಬಂದಿದ್ದು, ಈ ಆರೋಪಗಳು ತನಿಖೆಯಿಂದ ದೃಢಪಡಬೇಕಿದೆ. ಪ್ರಕಾಶ್ ಅವರ ಹತ್ಯೆಯ ಹಿಂದೆ ಯಾರು ಇದ್ದಾರೆ ಎಂಬುದನ್ನು ಪತ್ತೆಹಚ್ಚಲು ಶಾರ್ಜಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಏತನ್ಮಧ್ಯೆ, ಪ್ರಕಾಶ್ ಅವರ ಮೃತದೇಹವನ್ನು ಭಾರತಕ್ಕೆ ತರಲು ಕುಟುಂಬಸ್ಥರು ಕಾಯುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular