ನವದೆಹಲಿ : ಟಿಸಿಎಸ್‌ಗೆ ಸಂಬಂಧಿಸಿದ ನಾಸಿಕ್ ಬಿಪಿಒ ಘಟಕದಲ್ಲಿ ನಡೆದಿತ್ತೆನ್ನಲಾದ ಲೈಂಗಿಕ ಕಿರುಕುಳ ಹಾಗೂ ಧಾರ್ಮಿಕ ಮತಾಂತರ ಆರೋಪ ಪ್ರಕರಣದಲ್ಲಿ ಪ್ರಮುಖ ಆರೋಪಿ ನಿದಾ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 25 ದಿನಗಳ ಕಾಲ ನಡೆದ ಹುಡುಕಾಟದ ಬಳಿಕ ಛತ್ರಪತಿ ಸಂಭಾಜಿನಗರದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ.

ಕಳೆದ ತಿಂಗಳು ಟಿಸಿಎಸ್‌ಗೆ ಸಂಬಂಧಿಸಿದ ನಾಸಿಕ್ ಘಟಕದ ವಿರುದ್ಧ ಹಲವು ಮಹಿಳಾ ಉದ್ಯೋಗಿಗಳು ಗಂಭೀರ ಆರೋಪಗಳನ್ನು ಮಾಡಿದ್ದರು. ಹಿರಿಯ ಸಿಬ್ಬಂದಿ ಹಾಗೂ ತಂಡದ ನಾಯಕರಿಂದ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ, ಧಾರ್ಮಿಕ ಕಿರುಕುಳ ಹಾಗೂ ಬಲವಂತದ ಮತಾಂತರ ಯತ್ನ ನಡೆದಿದೆ ಎಂದು ದೂರು ನೀಡಲಾಗಿತ್ತು.
ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಿದಾ ಖಾನ್ ದೂರುದಾರರಿಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂದು ಆರೋಪಿಸಿದೆ. ಹಿಜಾಬ್, ಬುರ್ಖಾ ಧರಿಸಲು ಪ್ರೋತ್ಸಾಹಿಸಿದ್ದು, ಧಾರ್ಮಿಕ ವಿಷಯಗಳನ್ನು ಹಂಚಿಕೊಂಡಿರುವ ಆರೋಪವೂ ಕೇಳಿಬಂದಿದೆ. ಇದೇ ವೇಳೆ, ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಆರೋಪ ಎದುರಿಸುತ್ತಿರುವವರಿಗೆ ಸಹಾಯ ಮಾಡಿದ್ದು, ಸಂತ್ರಸ್ತರು ದೂರು ನೀಡದಂತೆ ಒತ್ತಡ ಹೇರಲಾಗಿದೆ ಎಂಬ ಆರೋಪಗಳೂ ದಾಖಲಾಗಿವೆ.
ಬಂಧನ ತಪ್ಪಿಸಿಕೊಳ್ಳಲು ನಿದಾ ಖಾನ್ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರೂ, ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತ್ತು. ತನಿಖೆಯಲ್ಲಿ ಡಿಜಿಟಲ್ ಸಾಕ್ಷ್ಯಗಳು, ಸಾಕ್ಷಿದಾರರ ಹೇಳಿಕೆಗಳು ಹಾಗೂ ರಾಜ್ಯದ ಹೊರಗಿನ ಸಂಪರ್ಕಗಳ ಸುಳಿವುಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಕಸ್ಟಡಿ ವಿಚಾರಣೆ ಅಗತ್ಯ ಎಂದು ಪೊಲೀಸರು ವಾದಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಡ್ಯಾನಿಶ್ ಶೇಖ್, ತೌಸಿಫ್ ಅತ್ತರ್, ರಜಾ ಮೆಮನ್, ಶಾರುಖ್ ಖುರೇಷಿ, ಶಫಿ ಶೇಖ್, ಆಸಿಫ್ ಅನ್ಸಾರಿ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ ಎಸ್‌ಐಟಿ ತನಿಖೆಯನ್ನು ಮತ್ತಷ್ಟು ವಿಸ್ತರಿಸಿದೆ.


