ಮಂಗಳೂರು : ಶಿಕ್ಷಣ, ಸಂಶೋಧನೆ ಹಾಗೂ ನವೀನತೆಯ ಕ್ಷೇತ್ರದಲ್ಲಿ ನಿರಂತರ ಸಾಧನೆ ಮಾಡುತ್ತಿರುವ ಶ್ರೀನಿವಾಸ್ ಯೂನಿವರ್ಸಿಟಿ ಮತ್ತೊಮ್ಮೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಥೈಲ್ಯಾಂಡ್ನ Bangkok ನಲ್ಲಿ ನಡೆದ ಪ್ರತಿಷ್ಠಿತ ಗ್ಲೋಬಲ್ ಎಜುಕೇಷನ್ ಸಮ್ಮಿಟ್ನಲ್ಲಿ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎಂದು ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಶ್ರೀನಿವಾಸ ರಾವ್ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿವಂಗತ ಶಿಕ್ಷಣ ದಾರ್ಶನಿಕ ಡಾ. ಸಿ.ಎ.ಎ. ರಾಘವೇಂದ್ರ ರಾವ್ ಅವರ ದೂರದೃಷ್ಟಿಯ ಫಲವಾಗಿ ಬೆಳೆದಿರುವ ಶ್ರೀನಿವಾಸ ಸಂಸ್ಥೆಗಳು ಇಂದು ಉನ್ನತ ಶಿಕ್ಷಣ, ಸಂಶೋಧನೆ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಮುಖಿ ಶಿಕ್ಷಣ ಕ್ಷೇತ್ರದಲ್ಲಿ ದೇಶದ ಪ್ರಮುಖ ಶಿಕ್ಷಣ ಸಮೂಹಗಳಲ್ಲಿ ಒಂದಾಗಿ ಗುರುತಿಸಿಕೊಂಡಿವೆ ಎಂದು ಹೇಳಿದರು.
ಟಿಸಿಎಸ್, ಮೈಕ್ರೋಸಾಫ್ಟ್, ಐಬಿಎಂ, ಗೂಗಲ್, ಇಂಟೆಲ್ ಹಾಗೂ ಯುಐಪಾತ್ ಸೇರಿದಂತೆ ಹಲವು ಬಹುರಾಷ್ಟ್ರೀಯ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಸಹಭಾಗಿತ್ವ ಹೊಂದಿರುವ ವಿಶ್ವವಿದ್ಯಾಲಯವು ಕರ್ನಾಟಕದಲ್ಲೇ ಮೊದಲ ಬಾರಿಗೆ ಏರ್ಕ್ರಾಫ್ಟ್ ಮೆಂಟಿನೆನ್ಸ್ ಎಂಜಿನಿಯರಿಂಗ್ನಲ್ಲಿ ನಾಲ್ಕು ವರ್ಷದ ಬಿ.ಟೆಕ್ ಕಾರ್ಯಕ್ರಮ ಆರಂಭಿಸಿದೆ ಎಂದು ತಿಳಿಸಿದರು.
ಸಂಶೋಧನಾ ಕ್ಷೇತ್ರದಲ್ಲಿಯೂ ವಿಶ್ವವಿದ್ಯಾಲಯವು 593 ಕಾಪಿರೈಟ್ಗಳು, 28 ಪೇಟೆಂಟ್ಗಳು, 157ಕ್ಕೂ ಅಧಿಕ ಪೇಟೆಂಟ್ ಪ್ರಕಟಣೆಗಳು ಹಾಗೂ 2000ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಸಂಶೋಧನಾ ಪ್ರಕಟಣೆಗಳನ್ನು ದಾಖಲಿಸಿದ್ದು, ವಿವಿಧ ಸಂಸ್ಥೆಗಳಿಂದ ₹115 ಕೋಟಿಗೂ ಅಧಿಕ ಸಂಶೋಧನಾ ಅನುದಾನವನ್ನು ಪಡೆದಿದೆ ಎಂದು ವಿವರಿಸಿದರು.
ಬ್ಯಾಂಕಾಕ್ನಲ್ಲಿ ನಡೆದ ಶೃಂಗಸಭೆಯಲ್ಲಿ ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಶ್ರೀನಿವಾಸ ಮಯ್ಯ ಡಿ ಹಾಗೂ ತರಬೇತಿ ಮತ್ತು ನೇಮಕಾತಿ ಅಧಿಕಾರಿ ಡಾ. ಧೀರಜ್ ಹೆಬ್ರಿ ಭಾಗವಹಿಸಿ ಸಂಸ್ಥೆಯ ಶೈಕ್ಷಣಿಕ ಸಾಧನೆಗಳನ್ನು ಜಾಗತಿಕ ವೇದಿಕೆಯಲ್ಲಿ ಅನಾವರಣಗೊಳಿಸಿದರು.
ಏಷ್ಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಧುರಕಿಜ್ ಪುಂಡಿತ್ ವಿಶ್ವವಿದ್ಯಾಲಯ, ಸಿಯಾಮ್ ವಿಶ್ವವಿದ್ಯಾಲಯ, ಬ್ಯಾಂಕಾಕ್ ವಿಶ್ವವಿದ್ಯಾಲಯ ಹಾಗೂ ಎಡುಸ್ಕಿಲ್ಸ್ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಲಾದ ಈ ಶೃಂಗಸಭೆಯಲ್ಲಿ ಭಾರತ ಮತ್ತು ಥೈಲ್ಯಾಂಡ್ನ ಶಿಕ್ಷಣ ತಜ್ಞರು, ಉದ್ಯಮ ನಾಯಕರು ಹಾಗೂ ಸಂಶೋಧಕರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯಕ್ಕೆ “Global Excellence Award in Higher Education & Research”, ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ “Excellence in Industry Integrated Technical Education Award” ಹಾಗೂ ಡಾ. ಶ್ರೀನಿವಾಸ ಮಯ್ಯ ಡಿ ಅವರಿಗೆ “Visionary Education Leader Award” ಪ್ರದಾನ ಮಾಡಲಾಯಿತು.
ಶಿಕ್ಷಣ, ಸಂಶೋಧನೆ, ಉದ್ಯಮ-ಸಂಯೋಜಿತ ಕಲಿಕೆ ಹಾಗೂ ವಿದ್ಯಾರ್ಥಿ ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಂಸ್ಥೆಗಳು ನೀಡಿರುವ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ಸಮ್ಮಿಟ್ನ ಅಂಗವಾಗಿ ಥೈಲ್ಯಾಂಡ್ನ ಪ್ರಮುಖ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿದ ಪ್ರತಿನಿಧಿಗಳು ವಿದ್ಯಾರ್ಥಿ ಮತ್ತು ಸಿಬ್ಬಂದಿ ವಿನಿಮಯ ಕಾರ್ಯಕ್ರಮಗಳು, ಸಂಯುಕ್ತ ಸಂಶೋಧನೆ, ಜಾಗತಿಕ ಇಂಟರ್ನ್ಶಿಪ್ಗಳು ಹಾಗೂ ಉದ್ಯೋಗಾವಕಾಶಗಳ ಕುರಿತು ಸಮಾಲೋಚನೆ ನಡೆಸಿದರು.
ಸ್ಥಳೀಯ ವಿದ್ಯಾರ್ಥಿಗಳಿಗೆ ಜಾಗತಿಕ ಶಿಕ್ಷಣ, ಜಾಗತಿಕ ಅನುಭವ ಮತ್ತು ಉತ್ತಮ ಉದ್ಯೋಗಾವಕಾಶಗಳನ್ನು ತಲುಪಿಸುವುದು ಶ್ರೀನಿವಾಸ ಸಂಸ್ಥೆಗಳ ಧ್ಯೇಯವಾಗಿದ್ದು, ಬ್ಯಾಂಕಾಕ್ನಲ್ಲಿ ದೊರೆತ ಈ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಆ ಧ್ಯೇಯಕ್ಕೆ ದೊರೆತ ಜಾಗತಿಕ ಮಾನ್ಯತೆಯಾಗಿದೆ ಎಂದು ಡಾ. ಶ್ರೀನಿವಾಸ ರಾವ್ ತಿಳಿಸಿದರು.

