ಕೋಯಿಕೋಡ್ : ವಿದೇಶದಿಂದ ಆಗಮಿಸುವ ಪ್ರಯಾಣಿಕರಿಂದ ಚಿನ್ನ, ನಗದು ಹಾಗೂ ಇತರ ಮೌಲ್ಯಯುತ ವಸ್ತುಗಳನ್ನು ದರೋಡೆ ಮಾಡಲು ಸಂಚು ರೂಪಿಸಿದ್ದ ಆರೋಪದಲ್ಲಿ ಕೊಡಗು ಜಿಲ್ಲೆಯ ಯುವಕ ಸೇರಿ 13 ಮಂದಿಯನ್ನು ಕೋಯಿಕೋಡ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಲ್ಲಿ ವಿರಾಜಪೇಟೆಯ ನೆಹರುನಗರ ನಿವಾಸಿ ಹಾಗೂ ಕೇಬಲ್ ಕಾರ್ಮಿಕನಾಗಿರುವ ಅಭಿ ಅಲಿಯಾಸ್ ಅಭೀಲಾಶ್ (31) ಸೇರಿದಂತೆ ಕಣ್ಣೂರು, ಕೋಯಿಕೋಡ್ ಮತ್ತು ಮಲಪ್ಪುರ ಜಿಲ್ಲೆಗಳ ಯುವಕರು ಸೇರಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ಕಣ್ಣೂರು ಮೂಲದ ಅನ್ಸಾರ್ ಹಾಗೂ ಪರಪ್ಪನಂಗಡಿ ನಿವಾಸಿ ಆಲಿ ಅಕ್ಬರ್ ಅವರ ಸೂಚನೆಯಂತೆ ವಿದೇಶದಿಂದ ಬರುವ ಪ್ರಯಾಣಿಕರನ್ನು ಗುರಿಯಾಗಿಸಿ ದರೋಡೆ ನಡೆಸಲು ತಂಡ ರಚಿಸಲಾಗಿತ್ತು. ದರೋಡೆ, ಕೊಲೆ ಹಾಗೂ ಇತರ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿದ್ದವರನ್ನು ಬಳಸಿಕೊಂಡು ಈ ಕಾರ್ಯಾಚರಣೆಗೆ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ.
ಭಾನುವಾರ ರಾತ್ರಿ ಕರಿಪುರಂನ ಕೋಯಿಕೋಡ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ವಿಮಾನದಲ್ಲಿ ಚಿನ್ನ ಸಾಗಾಟವಾಗುತ್ತಿದೆ ಎಂಬ ಮಾಹಿತಿಯ ಆಧಾರದಲ್ಲಿ ತಂಡವು ದರೋಡೆಗೆ ಹೊಂಚು ಹಾಕಿತ್ತು. ರಾತ್ರಿ ಸುಮಾರು 9.30ರ ವೇಳೆಗೆ ವಿಮಾನ ನಿಲ್ದಾಣದ ಹೊರವಲಯದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದವರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಸಂಚಿನ ಮಾಹಿತಿ ಬೆಳಕಿಗೆ ಬಂದಿದೆ.
ವಿಚಾರಣೆ ವೇಳೆ ಪ್ರಯಾಣಿಕರಿಂದ ಚಿನ್ನ ದರೋಡೆ ಮಾಡಲು ಯೋಜನೆ ರೂಪಿಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ನಡುವೆ ಜೆಡ್ಡಾದಿಂದ ಆಗಮಿಸಿದ್ದ ವ್ಯಕ್ತಿಯೊಬ್ಬ ಕಾಣೆಯಾಗಿದ್ದು, ಮೂವರು ಆರೋಪಿಗಳು ಕಾರಿನಲ್ಲಿ ಪರಾರಿಯಾಗಿರುವ ಮಾಹಿತಿ ಲಭ್ಯವಾಗಿದೆ.
ಬಂಧಿತರಿಂದ ಕೃತ್ಯಕ್ಕೆ ಬಳಸಲಾಗಿದ್ದ ಮೂರು ಕಾರುಗಳು, ಎರಡು ದ್ವಿಚಕ್ರ ವಾಹನಗಳು ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೊಬೈಲ್‌ಗಳಲ್ಲಿನ ವಾಟ್ಸ್ಆಪ್ ಸಂದೇಶಗಳು
ಹಾಗೂ ಕರೆಗಳ ವಿವರಗಳನ್ನು ಪರಿಶೀಲಿಸುತ್ತಿರುವ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಈ ತಂಡಕ್ಕೆ ಚಿನ್ನ ಕಳ್ಳಸಾಗಣೆ ಜಾಲದೊಂದಿಗೆ ಯಾವುದೇ ನಂಟಿದೆಯೇ ಎಂಬುದೂ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.


