ಮಂಗಳೂರು : ಪರಿಸರ ಸ್ನೇಹಿ ಜೀವನಶೈಲಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮಂಗಳೂರಿನ ವೈದ್ಯೆ ಹಾಗೂ ಸಂಜೀವಿನಿ ಗಾರ್ಡನ್ ಪ್ರೊಡಕ್ಟ್ ಸಂಸ್ಥೆಯ ಮಾಲಕಿ ಡಾ. ಮೀರಾ ಅವರು ಬಿದಿರಿನಿಂದ ವಿಶೇಷ ಮನೆಯನ್ನು ನಿರ್ಮಿಸಿದ್ದು, ಇದೀಗ ಈ ಮನೆ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಮಂಗಳೂರಿನ ಕಣ್ಣೂರು ಸಮೀಪ ನದಿ ತೀರದಲ್ಲಿ ನಿರ್ಮಾಣಗೊಂಡಿರುವ ಈ ಮನೆ 2016ರಲ್ಲಿ ಕಟ್ಟಲ್ಪಟ್ಟಿದ್ದು, ಎಂಟು ವರ್ಷಗಳಾದರೂ ಯಾವುದೇ ಹಾನಿಯಿಲ್ಲದೆ ತನ್ನ ನೈಸರ್ಗಿಕ ಸೌಂದರ್ಯವನ್ನು ಉಳಿಸಿಕೊಂಡಿದೆ. ಹೊರಭಾಗದ ಜೊತೆಗೆ ಒಳಾಂಗಣ ವಿನ್ಯಾಸವೂ ವಿಶಿಷ್ಟವಾಗಿದ್ದು, ಪರಿಸರ ಸ್ನೇಹಿ ಕಟ್ಟಡ ನಿರ್ಮಾಣಕ್ಕೆ ಮಾದರಿಯಾಗಿದೆ.
ಮನೆಯ ತಳಪಾಯವನ್ನು ಕಾಂಕ್ರೀಟ್ ಪಿಲ್ಲರ್ಗಳಿಂದ ನಿರ್ಮಿಸಲಾಗಿದ್ದು, ನೆಲಕ್ಕೆ ಮರ ಬಳಸಲಾಗಿದೆ. ಗೋಡೆ, ಬಾಗಿಲು, ಮೆಟ್ಟಿಲು ಸೇರಿದಂತೆ ಬಹುತೇಕ ಭಾಗಗಳನ್ನು ಬಿದಿರಿನಿಂದಲೇ ನಿರ್ಮಿಸಲಾಗಿದೆ. ಗೋಡೆಗಳಿಗೆ ಬಿದಿರಿನ ಫ್ಲೈವುಡ್ ಶೀಟ್ ಅಳವಡಿಸಲಾಗಿದ್ದು, ಮೇಲ್ಛಾವಣಿಯಲ್ಲಿ ಉಪ್ಪು ನೀರಿನಲ್ಲಿ ಸಂಸ್ಕರಿಸಿದ ತೆಂಗಿನ ಗರಿ ಹಾಗೂ ಅದರ ಮೇಲ್ಭಾಗದಲ್ಲಿ ಆಂಡಲೀನ್ ಶೀಟ್ ಅಳವಡಿಸಲಾಗಿದೆ.
ಸುಮಾರು 800 ಚದರಡಿ ವಿಸ್ತೀರ್ಣ ಹೊಂದಿರುವ ಈ ಮನೆಯಲ್ಲಿ ವರಾಂಡಾ, ಹಾಲ್, ಅಡುಗೆ ಕೋಣೆ, ಒಂದು ಮಲಗುವ ಕೋಣೆ ಮತ್ತು ವಾಶ್ರೂಂ ವ್ಯವಸ್ಥೆ ಇದೆ. ವಾರದಲ್ಲಿ ಎರಡು ದಿನ ಡಾ. ಮೀರಾ ಅವರು ಇಲ್ಲಿ ಕಾಲ ಕಳೆಯುತ್ತಾರೆ.
“ಮರಳು ಮತ್ತು ಸಿಮೆಂಟ್ ಬಳಕೆ ಕಡಿಮೆ ಮಾಡಿ ಪರಿಸರ ಸ್ನೇಹಿ ಮನೆ ನಿರ್ಮಿಸಬೇಕು ಎಂಬ ಉದ್ದೇಶದಿಂದ ಈ ಮನೆ ಕಟ್ಟಲಾಗಿದೆ. ಬಿದಿರನ್ನು ನೇರವಾಗಿ ನೆಲಕ್ಕೆ ಬಳಸಿದರೆ ಗೆದ್ದಲು ಸಮಸ್ಯೆ ಉಂಟಾಗುವ ಕಾರಣ ಕಾಂಕ್ರೀಟ್ ಪಿಲ್ಲರ್ಗಳ ಮೇಲೆ ಮನೆ ನಿರ್ಮಿಸಲಾಗಿದೆ,” ಎಂದು ಡಾ. ಮೀರಾ ತಿಳಿಸಿದ್ದಾರೆ. ಕೇರಳದ ನಿರ್ಮಾಣ ಸಂಸ್ಥೆಯ ಸಹಕಾರದಿಂದ ಕೇವಲ ಇಬ್ಬರು ಕಾರ್ಮಿಕರು ಈ ಮನೆ ನಿರ್ಮಿಸಿದ್ದು, ಮನೆಯ ನಿರ್ವಹಣೆಗೆ ಪ್ರತಿವರ್ಷ ಗೇರಿನ ಎಣ್ಣೆಯಿಂದ ಪಾಲಿಶ್ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪರಿಸರ ಸ್ನೇಹಿ ಹಾಗೂ ಮರುಬಳಕೆ ಸಾಧ್ಯವಾಗುವ ಸಂಪತ್ತಾಗಿರುವ ಬಿದಿರು ಕಟ್ಟಡ ನಿರ್ಮಾಣ, ಪೀಠೋಪಕರಣ ಹಾಗೂ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳಿಗೂ ಕಾರಣವಾಗುತ್ತಿದೆ.


