Sunday, August 16, 2026
Homeಜಿಲ್ಲೆಮಂಗಳೂರು : ಮಂಗಳೂರಿನಲ್ಲಿ ಜೂನ್ 12ರಿಂದ ‘ಕುಡ್ಲ ಪೆಲಕಾಯಿ ಪರ್ಬ’ : ಹಲಸು ಹಬ್ಬಕ್ಕೆ ಭರದ...

ಮಂಗಳೂರು : ಮಂಗಳೂರಿನಲ್ಲಿ ಜೂನ್ 12ರಿಂದ ‘ಕುಡ್ಲ ಪೆಲಕಾಯಿ ಪರ್ಬ’ : ಹಲಸು ಹಬ್ಬಕ್ಕೆ ಭರದ ಸಿದ್ಧತೆ.

ಮಂಗಳೂರು : ಹನಿ ಜೆನಿಕ್ಸ್ ವತಿಯಿಂದ ಆಯೋಜಿಸಲ್ಪಡುವ “ಕುಡ್ಲ ಪೆಲಕಾಯಿ ಪರ್ಬ – ಮಂಗಳೂರು ಹಲಸು ಹಬ್ಬ 2026” ಜೂನ್ 12ರಂದು ಅದ್ದೂರಿಯಾಗಿ ಆರಂಭಗೊಳ್ಳಲಿದ್ದು, ಜೂನ್ 12, 13 ಮತ್ತು 14ರಂದು ಮಂಗಳೂರಿನ ಬೆಂದೂರುವೆಲ್‌ನ ಸೇಂಟ್ ಸೆಬಾಸ್ಟಿಯನ್ ಪ್ಲಾಟಿನಂ ಜುಬಿಲಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಹಬ್ಬದ ಆಯೋಜಕರಾದ ಅಶ್ವಿನ್ ಸಿಕ್ವೆರಾ ಬರಿಮರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 12ರಂದು ಬೆಳಿಗ್ಗೆ 10:30ಕ್ಕೆ ವಿವಿಧ ಮಳಿಗೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ. ಖಾದರ್ ಶಾ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಅದೇ ದಿನ ಸಂಜೆ 7 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಬ್ರಿಜೇಶ್ ಚೌಟ , ತಾರಾನಾಥ್ ಗಟ್ಟಿ, ಡಾ. ಹೊನ್ನಪ್ಪ ಗೋವಿಂದ ಗೌಡ, ಖ್ಯಾತ ಮೋಟಿವೇಷನಲ್ ಹಾಗೂ ಇನ್ಫಾರ್ಮೇಟಿವ್ ಕಂಟೆಂಟ್ ಕ್ರಿಯೇಟರ್ ನಿತಿನ್ ಪೂಜಾರಿ ಹಾಗೂ ಫಾ. ವಾಲ್ಟರ್ ಸೋಜಾ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದರು.

ದಕ್ಷಿಣ ಕನ್ನಡ, ಉಡುಪಿ, ತುಮಕೂರು, ಚಿಕ್ಕಬಳ್ಳಾಪುರ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ರೈತರು ಹಬ್ಬದಲ್ಲಿ ಭಾಗವಹಿಸಲಿದ್ದು, ಕೊಡಗಿನ ಬೆಣ್ಣೆ ಹಣ್ಣು ಹಾಗೂ ರಾಮನಗರದ ರಾಸಾಯನಿಕ ಮುಕ್ತ ಮಾವಿನ ಹಣ್ಣುಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜೊತೆಗೆ ರಂಬುತಾನ್, ಡ್ರಾಗನ್ ಫ್ರೂಟ್, ಪುಲಾಸಾನ್, ಮ್ಯಾಂಗೋಸ್ಟೀನ್ ಸೇರಿದಂತೆ ವಿವಿಧ ಎಕ್ಸೋಟಿಕ್ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟವೂ ನಡೆಯಲಿದೆ.
ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆಗಳು, ಸಾರ್ವಜನಿಕರಿಗಾಗಿ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಜೂನ್ 13ರಂದು ಸಹ್ಯಾದ್ರಿ ಕಾಲೇಜಿನ ಎಂಬಿಎ ವಿಭಾಗದ ವಿದ್ಯಾರ್ಥಿಗಳು ಹಾಗೂ ಜೂನ್ 14ರಂದು ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮ ನಿರ್ವಹಣೆಗೆ ಸಹಕರಿಸಲಿದ್ದಾರೆ.

ನಿಟ್ಟೆ ಹೋಟೆಲ್ ಮ್ಯಾನೇಜ್‌ಮೆಂಟ್ ಹಾಗೂ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಾಲಿಟಿ ಸರ್ವಿಸಸ್ ವಿದ್ಯಾರ್ಥಿಗಳ ಸಹಯೋಗದಲ್ಲಿ ಹಲಸಿನ ಉಪ ಉತ್ಪನ್ನಗಳ ಲೈವ್ ಫುಡ್ ಕೌಂಟರ್ ಕೂಡ ವಿಶೇಷ ಆಕರ್ಷಣೆಯಾಗಲಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೇಲ್ಡನ್ ಕ್ರಾಸ್ತ, ರಿಯಾನ್ ಮೌನಿಸ್, ಭಾಸ್ಕರ್ ಕಟ್ಟಾ ಹಾಗೂ ಜಾಕ್ಸನ್ ಸಾಲ್ದಾನ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular