ಮಂಗಳೂರು : ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಬಿಲ್ಲವ ಹಾಗೂ ಬಂಟ್ಸ್ ಸಮುದಾಯಗಳ ವಿರುದ್ಧ ಅವಹೇಳನಕಾರಿ ವಿಡಿಯೋ ಮತ್ತು ಪೋಸ್ಟ್ಗಳನ್ನು ಹಂಚಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರಲು ಯತ್ನಿಸಿದ ಆರೋಪದ ಮೇಲೆ ಅನಿತಾ ಕಾಸರಗೋಡು ವಿರುದ್ಧ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ಘಟಕದ ಅಧ್ಯಕ್ಷ ರಾಕೇಶ್ ಅವರು ನೀಡಿದ ಲಿಖಿತ ದೂರಿನ ಮೇರೆಗೆ ಬರ್ಕೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 196, 353(2) ಮತ್ತು 352ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ದೂರಿನ ಪ್ರಕಾರ, ಜೂನ್ 8ರಂದು ಸಂಜೆ ಫೇಸ್ಬುಕ್ ವೀಕ್ಷಿಸುತ್ತಿದ್ದ ವೇಳೆ ‘ಅನಿತಾ ಕಾಸರಗೋಡು ‘ ಹೆಸರಿನ ಖಾತೆಯಲ್ಲಿ ಹಿಂದೂ ಧರ್ಮ ಹಾಗೂ ಬಿಲ್ಲವ, ಬಂಟ್ಸ್ ಸೇರಿದಂತೆ ಕೆಲವು ಸಮುದಾಯಗಳ ವಿರುದ್ಧ ಅವಹೇಳನಕಾರಿ ಮತ್ತು ಪ್ರಚೋದನಾತ್ಮಕ ಹೇಳಿಕೆಗಳನ್ನು ಒಳಗೊಂಡ ವಿಡಿಯೋವನ್ನು ರಾಕೇಶ್ ಗಮನಿಸಿದ್ದರು. ಈ ವಿಡಿಯೋದಲ್ಲಿ ನಿರ್ದಿಷ್ಟ ಸಮುದಾಯಗಳನ್ನು ನಿಂದಿಸುವುದರ ಜೊತೆಗೆ ಸಮಾಜದಲ್ಲಿ ದ್ವೇಷ ಹಾಗೂ ಉದ್ವಿಗ್ನತೆ ಸೃಷ್ಟಿಸುವ ರೀತಿಯ ಮಾತುಗಳನ್ನು ಆಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆರೋಪಿತೆ ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡಿಕೊಂಡು ವಿವಿಧ ಧರ್ಮ ಹಾಗೂ ಸಮುದಾಯಗಳ ನಡುವೆ ದ್ವೇಷದ ಭಾವನೆ ಮೂಡಿಸಲು ಪ್ರಯತ್ನಿಸಿದ್ದಾಳೆ. ಅಲ್ಲದೆ ಜನರನ್ನು ಕಾನೂನುಬಾಹಿರ ಚಟುವಟಿಕೆಗಳಿಗೆ ಪ್ರಚೋದಿಸುವ ಹಾಗೂ ಒಂದು ಸಮುದಾಯದ ವಿರುದ್ಧ ಮತ್ತೊಂದು ಸಮುದಾಯವನ್ನು ಎತ್ತಿಕಟ್ಟುವ ಉದ್ದೇಶದಿಂದಲೇ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೀಗ ಪ್ರಕರಣ ದಾಖಲಿಸಿರುವ ಬರ್ಕೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಇನ್ನೊಂದೆಡೆ, ಬೆಳ್ತಂಗಡಿಯ ಬಿಲ್ಲವ ಮುಖಂಡರು ಸಹ ಅನಿತಾ ಕಾಸರಗೋಡು ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿತೆಯನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿರುವ ಅವರು, ಕ್ರಮ ಕೈಗೊಳ್ಳದಿದ್ದಲ್ಲಿ ಸಂಘಟನೆಯ ನೇತೃತ್ವದಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅದೇ ರೀತಿ, ಉದಯ ಪೂಜಾರಿ ನೇತೃತ್ವದ ಬಿರ್ವೆರ್ ಕುಡ್ಲ ಮತ್ತು ಫ್ರೆಂಡ್ಸ್ ಬಳ್ಳಾಲ್ಬಾಗ್ ಸಂಘಟನೆಯ ನಿಯೋಗವು ಬರ್ಕೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಕಾನೂನು ಕ್ರಮಕ್ಕೆ ಒತ್ತಾಯಿಸಿದೆ.

