ಮಂಗಳೂರು : ಬಹುಕಾಲದಿಂದ ಬಾಕಿ ಉಳಿದಿದ್ದ ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ಒಂದೇ ಆಡಳಿತದಡಿ ತರುವ ಬೇಡಿಕೆಗೆ ಇದೀಗ ಮಹತ್ವದ ಮುನ್ನಡೆ ದೊರೆತಿದೆ. ದಕ್ಷಿಣ ರೈಲ್ವೆ ಹಾಗೂ ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ವಿಭಜನೆಯಾಗಿರುವ ಮಂಗಳೂರು ರೈಲ್ವೆ ಪ್ರದೇಶವನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗದಡಿ ತರಲು ಕ್ರಮ ಕೈಗೊಳ್ಳಲಾಗಿದೆ.

ಈ ಕುರಿತು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, 2024ರ ಜೂನ್‌ನಲ್ಲಿ ಸಂಸದರಾದ ಕೆಲವೇ ದಿನಗಳಲ್ಲಿ ಈ ಬೇಡಿಕೆಯನ್ನು ಆದ್ಯತೆಯಾಗಿ ಮುಂದಿಟ್ಟಿದ್ದಾಗಿ ತಿಳಿಸಿದ್ದಾರೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ನಿರಂತರವಾಗಿ ಈ ವಿಚಾರವನ್ನು ಪ್ರಸ್ತಾಪಿಸಲಾಗಿದ್ದು, ಸಂಸತ್ ಸೇರಿದಂತೆ ವಿವಿಧ ಅಧಿಕೃತ ವೇದಿಕೆಗಳ ಮೂಲಕವೂ ಬೇಡಿಕೆಯನ್ನು ಮುಂದಿಟ್ಟಿರುವುದಾಗಿ ಚೌಟ ಹೇಳಿದ್ದಾರೆ.
ಒಂದೇ ಆಡಳಿತದಿಂದ ಹಲವು ಪ್ರಯೋಜನ ಮಂಗಳೂರು ರೈಲ್ವೆ ವ್ಯಾಪ್ತಿ ಒಂದೇ ವಿಭಾಗದಡಿ ಬಂದರೆ ಆಡಳಿತಾತ್ಮಕ ಅಡೆತಡೆಗಳು ಕಡಿಮೆಯಾಗುವ, ವಿವಿಧ ರೈಲ್ವೆ ಕಾಮಗಾರಿಗಳ ಸಮನ್ವಯ ಸುಧಾರಿಸುವ ಹಾಗೂ ಪ್ರಯಾಣಿಕರ ಸಮಸ್ಯೆಗಳಿಗೆ ವೇಗವಾಗಿ ಪರಿಹಾರ ದೊರೆಯುವ ನಿರೀಕ್ಷೆಯಿದೆ.
ಅಲ್ಲದೆ, ಕರಾವಳಿ ಕರ್ನಾಟಕದಲ್ಲಿ ರೈಲ್ವೆ ಮೂಲಸೌಕರ್ಯ ಹಾಗೂ ಸಂಪರ್ಕ ವ್ಯವಸ್ಥೆಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಸಿಗುವ ಸಾಧ್ಯತೆಯಿದೆ. ಅಧಿಕೃತ ಅಧಿಸೂಚನೆ ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದ್ದು, ಮಂಗಳೂರಿನ ರೈಲ್ವೆ ಸಂಬಂಧಿತ ಹಲವು ಬೇಡಿಕೆಗಳಿಗೆ ವೇಗ ಸಿಗಲಿದೆ ಎಂದು ಸಂಸದರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

