Saturday, June 27, 2026
Homeಜಿಲ್ಲೆಮಂಗಳೂರು : ವೃದ್ಧೆಯ ಚಿನ್ನದ ಸರ ಕಸಿತ ಪ್ರಕರಣ : ಇಬ್ಬರ ಬಂಧನ, ಪೊಲೀಸರ ಮೇಲೆ...

ಮಂಗಳೂರು : ವೃದ್ಧೆಯ ಚಿನ್ನದ ಸರ ಕಸಿತ ಪ್ರಕರಣ : ಇಬ್ಬರ ಬಂಧನ, ಪೊಲೀಸರ ಮೇಲೆ ಹಲ್ಲೆ ನಡೆಸಿ ಓರ್ವ ಆರೋಪಿ ಪರಾರಿ.

ಮಂಗಳೂರು : ಮಂಗಳೂರು ನಗರದ ಸೂಟರ್‌ಪೇಟೆಯಲ್ಲಿ ವೃದ್ಧ ಮಹಿಳೆಯ ಕುತ್ತಿಗೆಯಿಂದ ಸುಮಾರು ₹1.50 ಲಕ್ಷ ಮೌಲ್ಯದ 12 ಗ್ರಾಂ ತೂಕದ ಲಕ್ಷ್ಮಿ ಪೆಂಡೆಂಟ್ ಹೊಂದಿದ್ದ ಬಂಗಾರದ ಸರವನ್ನು ಕಸಿದು ಪರಾರಿಯಾಗಿದ್ದ ಪ್ರಕರಣವನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

ಜೂನ್ 14ರಂದು ಮಧ್ಯಾಹ್ನ ಎಕ್ಕೂರು ಬಸ್ ನಿಲ್ದಾಣದಿಂದ ಇಳಿದು ಸೂಟರ್‌ಪೇಟೆ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಸಮೀಪ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ವಿಳಾಸ ಕೇಳುವ ನೆಪದಲ್ಲಿ ಏಕಾಏಕಿ ಚಿನ್ನದ ಸರ ಕಸಿದು ಪರಾರಿಯಾಗಿದ್ದರು. ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜೂನ್ 26ರಂದು ಪಾಂಡೇಶ್ವರದ ರೋಸಾರಿಯೋ ಶಾಲೆ ಸಮೀಪ ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಸರ ಕಳವು ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳಾದ ರವಿ ಬೌರಾ (38, ಉತ್ತರ ಪ್ರದೇಶ) ಹಾಗೂ ಮೊಹಮ್ಮದ್ ಸಾಹಿಲ್ @ ಸಿದ್ದೀಖಿ (26, ಉತ್ತರ ಪ್ರದೇಶ) ಅವರನ್ನು ಬಂಧಿಸಲಾಗಿದೆ.

ನ್ಯಾಯಾಲಯವು ಇಬ್ಬರನ್ನು ಜುಲೈ 6ರವರೆಗೆ 10 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಇದೇ ವೇಳೆ, ಅಲ್ತಾಫ್ ಹುಸೈನ್ (ಬಾಗಲಕೋಟೆ) ಎಂಬ ಆರೋಪಿ ಪೊಲೀಸ್ ಸಿಬ್ಬಂದಿ ವಿನಾಯಕ ಅವರ ಮೇಲೆ ಹಲ್ಲೆ ನಡೆಸಿ ತಳ್ಳಿ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಪರಾರಿಯಾಗಿರುವ ಆರೋಪಿಯ ಬಂಧನಕ್ಕಾಗಿ ವಿಶೇಷ ತಂಡ ರಚಿಸಿ ಶೋಧ ಕಾರ್ಯ ಮುಂದುವರಿಸಲಾಗಿದೆ. ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಸಿದ ಪೊಲೀಸ್ ತಂಡ ಪ್ರಕರಣವನ್ನು ತ್ವರಿತವಾಗಿ ಭೇದಿಸಿದ್ದು, ಮುಂದಿನ ತನಿಖೆ ಮುಂದುವರಿದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular