ಮಂಗಳೂರು : ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ (KKPL)ಗೆ ಕರಾವಳಿಯ ಪ್ರತಿನಿಧಿಯಾಗಿ ಕಣಕ್ಕಿಳಿಯಲಿರುವ ‘ಮಂಗಳೂರು’ ತಂಡದ ಅಧಿಕೃತ ಹೆಸರು ಮತ್ತು ಲೋಗೋವನ್ನು ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ ಅವರು ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಅನಾವರಣಗೊಳಿಸಿದರು.

ಈ ವೇಳೆ ಮಾತನಾಡಿದ ಅವರು, ಕರಾವಳಿ ಭಾಗದಲ್ಲಿ ಅಪಾರ ಕಬಡ್ಡಿ ಪ್ರತಿಭೆಗಳಿದ್ದು, ಅವರಿಗೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ವೇದಿಕೆ ಕಲ್ಪಿಸುವ ಉದ್ದೇಶದಿಂದ ಮಂಗಳೂರು ತಂಡವನ್ನು ಖರೀದಿಸಲಾಗಿದೆ ಎಂದು ಹೇಳಿದರು. ಗ್ರಾಮೀಣ ಕ್ರೀಡೆಯಾದ ಕಬಡ್ಡಿಯನ್ನು ಮತ್ತಷ್ಟು ಜನಪ್ರಿಯಗೊಳಿಸಿ, ಯುವ ಆಟಗಾರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಸಂಕಲ್ಪದೊಂದಿಗೆ ತಂಡವನ್ನು ರೂಪಿಸಲಾಗಿದೆ ಎಂದರು.
ಮಂಗಳೂರು ತಂಡವು ಕೇವಲ ಪಂದ್ಯಾವಳಿಯಲ್ಲಿ ಭಾಗವಹಿಸುವುದಷ್ಟೇ ಅಲ್ಲ, ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಬಲಿಷ್ಠ ತಂಡವನ್ನು ಕಟ್ಟುತ್ತಿದೆ. ಮುಖ್ಯ ಕೋಚ್ ಹಬೀಬ್ ಮಾಣಿ ಅವರ ಮಾರ್ಗದರ್ಶನದಲ್ಲಿ ಹಾಗೂ ಬ್ರಾಂಡ್ ಅಂಬಾಸಿಡರ್‌ಗಳಾದ ಬೋಜ್ ರಾಜ್ ವಾಮಂಜೂರು ಮತ್ತು ದೇವದಾಸ್ ಕಾಪಿಕಾಡ್ ಅವರ ಬೆಂಬಲದೊಂದಿಗೆ ತಂಡ ಸಿದ್ಧತೆ ಆರಂಭಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುದೇಶ್ ಭಂಡಾರಿ, ಇಮ್ತಿಯಾಜ್, ನಿಶಾನ್, ದಿವಿಶ್, ಪುರುಷೋತ್ತಮ ಭಂಡಾರಿ ಸೇರಿದಂತೆ ತಂಡದ ಪ್ರಮುಖರು ಹಾಗೂ ಕಬಡ್ಡಿ ಅಭಿಮಾನಿಗಳು ಉಪಸ್ಥಿತರಿದ್ದರು.



