ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಕುತ್ಲೂರು ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ BASF ಸಂಸ್ಥೆಯ ಸಿಎಸ್‌ಆರ್ ನಿಧಿಯಿಂದ 50 ಸಾವಿರ ರೂಪಾಯಿ ಮೌಲ್ಯದ ಪುಸ್ತಕ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಾಯಕ ನರ್ವಾಡೆ ಶಾಲಾ ಮಕ್ಕಳಿಗೆ ಪುಸ್ತಕ ಸಾಮಗ್ರಿಗಳನ್ನು ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಅವರು, “ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಂಘ-ಸಂಸ್ಥೆಗಳ ಸಹಕಾರ ಅತ್ಯಂತ ಅಗತ್ಯವಾಗಿದೆ. ಕುತ್ಲೂರು ಸರಕಾರಿ ಶಾಲೆಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿ ಆರಂಭಿಸಲು ಅಗತ್ಯವಿರುವ ಕೊಠಡಿ ನಿರ್ಮಾಣ ಸೇರಿದಂತೆ ಶಾಲೆಯ ಅಭಿವೃದ್ಧಿಗೆ ಜಿಲ್ಲಾ ಪಂಚಾಯತ್ ವತಿಯಿಂದ ಎಲ್ಲಾ ಸಹಕಾರ ನೀಡಲಾಗುವುದು” ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಬಳಿಕ ಸಿಇಒ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಬಿಎಎಸ್ಎಫ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಸಂತೋಷ್ ಪೈ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ, ಎಸ್‌ಡಿಎಂಸಿ ಅಧ್ಯಕ್ಷ ಕನಕವರ್ಮ ಜೈನ್, ಉಪಾಧ್ಯಕ್ಷೆ ಶ್ವೇತಾ ಜಗದೀಶ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಮಾರ್ದೊಟ್ಟು, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾಲತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.


