Monday, July 20, 2026
Homeದೇಶಬೆಳಗಾವಿ : ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯೂ ಇಲ್ಲ, ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ನೋಟಿಸೂ ನೀಡಿಲ್ಲ:...

ಬೆಳಗಾವಿ : ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯೂ ಇಲ್ಲ, ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ನೋಟಿಸೂ ನೀಡಿಲ್ಲ: ಸುರ್ಜೇವಾಲಾ..!

ಬೆಳಗಾವಿ : ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವೂ ಇಲ್ಲ, ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ನೋಟಿಸೂ ನೀಡಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೇವಾಲಾ ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿಯಲ್ಲಿ ಜ. ೨೧ ರಂದು ನಡೆಯಲಿರುವ ಜೈ ಬಾಪು ಜೈ ಭೀಮ್ ಜೈ ಸಂವಿಧಾನ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಲು ಬೆಳಗಾವಿಗೆ ಆಗಮಿಸಿರುವ ಅವರು, ಸಾಂಬ್ರಾ ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ಶಿಸ್ತು ಉಲ್ಲಂಘಿಸಿರುವುದಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ನೋಟಿಸ್ ಜಾರಿ ಮಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾವ ಸಚಿವರಿಗೂ ಯಾವ ನಾಯಕರಿಗೂ ನೋಟಿಸ್ ನೀಡಲು ಯಾವುದೇ ಕಾರಣವಿಲ್ಲ. ಯಾರು ಈ ರೀತಿ ವದಂತಿಗಳನ್ನು ಹಬ್ಬಿಸುತ್ತಿದ್ದಾರೋ ಗೊತ್ತಿಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಯ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುತ್ತಿದ್ದರೆ ಡಿ.ಕೆ ಶಿವಕುಮಾರ್ ಇಲ್ಲೇಕೆ ಬರುತ್ತಿದ್ದರು ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವನ್ನು ತಳ್ಳಿ ಹಾಕಿದರು.

ರಾಜ್ಯ ಕಾಂಗ್ರೆಸ್‌ನ ಆಂತರಿಕ ಸಂಘರ್ಷಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರುಗಳು ವದಂತಿಗಳನ್ನು ಹರಡುತ್ತಿದ್ದಾರೆ ಎಂದು ದೂರಿದ ಅವರು, ಬಿಜೆಪಿ ಪ್ರಾಯೋಜಿತ ವದಂತಿಗಳು ಆಧಾರರಹಿತ ಮಾಹಿತಿಗಳನ್ನು ಯಾರೂ ನಂಬಬಾರದು ಅದರ ಮೇಲೆ ವಿಶ್ವಾಸವನ್ನೂ ಇಡಬಾರದು ಎಂದು ಸುರ್ಜೇವಾಲಾ ಹೇಳಿದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹೇಳಿಕೆ ನೀಡಿದ್ದ ಸಚಿವ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ನೋಟಿಸ್ ನೀಡಿದೆ ಎಂಬ ಸುದ್ದಿಗಳು ನಿನ್ನೆ ಹರಿದಾಡಿದ್ದವು. ಈ ಸುದ್ದಿಗಳನ್ನು ಅಲ್ಲಗಳೆಯುವ ಮೂಲಕ ಸುರ್ಜೇವಾಲಾ ಎಲ್ಲ ವದಂತಿಗಳಿಗೂ ತೆರೆ ಎಳೆದಿದ್ದಾರೆ.

ಜಾರಕಿ ಹೊಳಿ ಭೇಟಿ ಬೆಳಗಾವಿಯಲ್ಲಿರುವ ಸುರ್ಜೇವಾಲಾ ಅವರನ್ನು ಸಚಿವ ಜಾರಕಿಹೊಳಿ ಇಂದು ಭೇಟಿ ಮಾಡಿ ಕಾಂಗ್ರೆಸ್‌ನ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು ಎನ್ನಲಾಗಿದೆ. ಹಾಗೆಯೇ ಬೆಳಗಾವಿಯಲ್ಲಿ ನಡೆಯಲಿರುವ ಗಾಂಧಿ ಭಾರತ ಸಮಾವೇಶದ ಬಗ್ಗೆಯೂ ಚರ್ಚೆಗಳನ್ನು ನಡೆಸಿದರು ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular