Thursday, July 2, 2026
Homeರಾಜ್ಯಬೆಂಗಳೂರು : ಡೇ ಕೇರ್‌ನಲ್ಲಿ ಪುಟಾಣಿ ಮಕ್ಕಳ ಮೇಲೆ ಅಮಾನವೀಯ ಹಿಂಸೆ; ಐವರು ಸಿಬ್ಬಂದಿ ವಿರುದ್ಧ...

ಬೆಂಗಳೂರು : ಡೇ ಕೇರ್‌ನಲ್ಲಿ ಪುಟಾಣಿ ಮಕ್ಕಳ ಮೇಲೆ ಅಮಾನವೀಯ ಹಿಂಸೆ; ಐವರು ಸಿಬ್ಬಂದಿ ವಿರುದ್ಧ ಎಫ್‌ಐಆರ್.

ಬೆಂಗಳೂರು : ನಗರದ ಖಾಸಗಿ ಡೇ ಕೇರ್ ಕೇಂದ್ರವೊಂದರಲ್ಲಿ ಎರಡು ಮತ್ತು ಮೂರು ವರ್ಷದ ಪುಟ್ಟ ಮಕ್ಕಳಿಗೆ ಅಮಾನವೀಯವಾಗಿ ಹಿಂಸೆ ನೀಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಐವರು ಮಹಿಳಾ ಕೇರ್‌ಟೇಕರ್‌ಗಳ ವಿರುದ್ಧ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ನಗರದ ಎಚ್‌ಎಎಲ್ ಪ್ರದೇಶದಲ್ಲಿರುವ ‘ಕ್ಯಾಪ್‌ಜೆಮಿನಿ’ ಕಂಪನಿಯ ಆವರಣದಲ್ಲಿರುವ ಶಿಶುಪಾಲನಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಡೇ ಕೇರ್‌ನ ಸಿಸಿಟಿವಿ ದೃಶ್ಯಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೋಷಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.

ಆರೋಪದ ಪ್ರಕಾರ, ತುಂಟಾಟ ಮಾಡಿದ ಮಕ್ಕಳನ್ನು ಸುಮ್ಮನಿರಿಸುವ ನೆಪದಲ್ಲಿ ಸಿಬ್ಬಂದಿ ಮಕ್ಕಳನ್ನು ವಾಷಿಂಗ್ ಮೆಷಿನ್ ಒಳಗೆ ಹಾಕುವುದು, ಟಾಯ್ಲೆಟ್ ಜೆಟ್ ಸ್ಪ್ರೇ ಮೂಲಕ ಬಲವಂತವಾಗಿ ಬಾಯಿಗೆ ನೀರು ಸಿಂಪಡಿಸುವುದು, ಶೌಚಾಲಯದಲ್ಲಿ ಕೂಡಿ ಹಾಕಿ ಹೆದರಿಸುವುದು ಸೇರಿದಂತೆ ಅಮಾನವೀಯವಾಗಿ ವರ್ತಿಸಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.

ವಿಡಿಯೋ ವೈರಲ್ ಆದ ಬಳಿಕ ಮಕ್ಕಳ ಸಹಾಯವಾಣಿಗೆ ದೂರು ಸಲ್ಲಿಕೆಯಾಗಿದ್ದು, ಅದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಐವರು ಮಹಿಳಾ ಸಿಬ್ಬಂದಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಎಚ್‌ಎಎಲ್ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಐಟಿ ಕಂಪನಿಗಳ ಉದ್ಯೋಗಿಗಳು ತಮ್ಮ ಮಕ್ಕಳನ್ನು ಈ ಡೇ ಕೇರ್‌ನಲ್ಲಿ ಬಿಟ್ಟು ಕೆಲಸಕ್ಕೆ ತೆರಳುತ್ತಿದ್ದರು. ಇದೀಗ ಈ ಪ್ರಕರಣ ಬಹಿರಂಗವಾಗುತ್ತಿದ್ದಂತೆ ಪೋಷಕರು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular