Tuesday, June 30, 2026
Homeಜಿಲ್ಲೆಬಂಟ್ವಾಳ : 117 ವರ್ಷಗಳ ಇತಿಹಾಸದ ಮೂಲರಪಟ್ನ ಶಾಲೆ ಈಗ ಮೌನ ; ನೆನಪು ಉಳಿಸಲು...

ಬಂಟ್ವಾಳ : 117 ವರ್ಷಗಳ ಇತಿಹಾಸದ ಮೂಲರಪಟ್ನ ಶಾಲೆ ಈಗ ಮೌನ ; ನೆನಪು ಉಳಿಸಲು ಹಳೆ ವಿದ್ಯಾರ್ಥಿಗಳ ಪಣ.

ಬಂಟ್ವಾಳ : ಒಂದು ಕಾಲದಲ್ಲಿ ಮಕ್ಕಳ ಕಲರವದಿಂದ ಕಂಗೊಳಿಸುತ್ತಿದ್ದ ಶಾಲೆ ಇಂದು ಮೌನದ ನೆನಪಿನ ಮನೆಯಾಗಿಬಿಟ್ಟಿದೆ. ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಮೂಲರಪಟ್ನ ಸಮೀಪದ ಶ್ರೀ ಚಂದ್ರನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಳೆದ ಏಳೆಂಟು ವರ್ಷಗಳಿಂದ ಮಕ್ಕಳಿಲ್ಲದೆ ಬಾಗಿಲು ಮುಚ್ಚಿದ್ದು, ಇದೀಗ ನೆನಪುಗಳ ಚಿತ್ರಶಾಲೆಯಾಗಿ ಉಳಿದಿದೆ.

1909ರಲ್ಲಿ ಸಮಾಜಸೇವಕ ಗುಮ್ಮಣ್ಣ ಶೆಟ್ಟಿ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಶಾಲೆ ಹಾಗೂ ಛತ್ರವನ್ನು ಆರಂಭಿಸಿದ್ದರು. ಬಳಿಕ ಅವರ ಪುತ್ರ ಧರ್ಮಪಾಲ ಶೆಟ್ಟಿ ನೇತೃತ್ವದಲ್ಲಿ ಶಾಲೆ ಸುಮಾರು 110ಕ್ಕೂ ಹೆಚ್ಚು ವರ್ಷಗಳ ಕಾಲ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣದ ಬೆಳಕು ನೀಡಿತು.
ಸ್ವಾತಂತ್ರ್ಯ ಪೂರ್ವದಲ್ಲಿ ಸುತ್ತಮುತ್ತ ಶಾಲೆಗಳೇ ಇಲ್ಲದ ಕಾರಣ ವಾಮದಪದವು, ಕುರಿಯಾಳ, ಕೊಯಿಲ, ರಾಯಿ, ಕುಪ್ಪೆಪದವು, ಮಿಜಾರು ಸೇರಿದಂತೆ ಹಲವು ಗ್ರಾಮಗಳಿಂದ ನೂರಾರು ಮಕ್ಕಳು ಇಲ್ಲಿಗೆ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದರು. ದೂರದ ಊರಿನ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆಯಿದ್ದ ಕಾರಣ ಈ ಶಾಲೆ “ಛತ್ರ ಶಾಲೆ” ಎಂದೇ ಪ್ರಸಿದ್ಧಿಯಾಗಿತ್ತು. ಸರ್ಕಾರದ ಅಕ್ಷರ ದಾಸೋಹ ಯೋಜನೆ ಜಾರಿಯಾಗುವ ಮುನ್ನವೇ ಇಲ್ಲಿನ ವಿದ್ಯಾರ್ಥಿಗಳಿಗೆ ಗಂಜಿ ಹಾಗೂ ಚಟ್ನಿ ನೀಡಲಾಗುತ್ತಿತ್ತು ಎನ್ನುವುದು ಈ ಶಾಲೆಯ ಮತ್ತೊಂದು ವಿಶೇಷ. ಗ್ರಾಮೀಣ ಭಾಗದ ಅನೇಕ ಮಕ್ಕಳಿಗೆ ಶಿಕ್ಷಣದ ಜೊತೆಗೆ ಆಶ್ರಯವನ್ನೂ ಈ ಶಾಲೆ ಒದಗಿಸಿತ್ತು.

ಆದರೆ ವರ್ಷದಿಂದ ವರ್ಷಕ್ಕೆ ಸುತ್ತಮುತ್ತ ಹೊಸ ಶಾಲೆಗಳು ಆರಂಭವಾದ ಪರಿಣಾಮ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು. ವಿದ್ಯಾರ್ಥಿಗಳ ಕೊರತೆಯಿಂದ ಶಿಕ್ಷಕರ ನೇಮಕವೂ ಸಾಧ್ಯವಾಗದೆ, ಸುಮಾರು ಏಳೆಂಟು ವರ್ಷಗಳ ಹಿಂದೆ ಶಾಲೆಗೆ ಬೀಗ ಹಾಕುವ ಅನಿವಾರ್ಯ ಪರಿಸ್ಥಿತಿ ಎದುರಾಯಿತು.

ಇಂದು ಶಾಲೆಯ ಕಟ್ಟಡ, ಕರಿಹಲಗೆ, ಧ್ವಜಸ್ತಂಭ ಇನ್ನೂ ಗಟ್ಟಿಯಾಗಿ ಉಳಿದಿದ್ದು, ಈ ಐತಿಹಾಸಿಕ ಶಾಲೆಯನ್ನು ಮುಂದಿನ ಪೀಳಿಗೆಗೆ ನೆನಪಿನ ಸ್ಮಾರಕವಾಗಿ ಸಂರಕ್ಷಿಸಲು ಹಳೆ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಮುಂದಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular