ಬೆಳ್ತಂಗಡಿ : ಅಡ್ಡ ಮತದಾನ ಮಾಡಿದ ಆರೋಪದ ಬೆನ್ನಲ್ಲೇ ಬೇಲೂರು ಶಾಸಕ ಎಚ್.ಕೆ. ಸುರೇಶ್ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿದರು.



ನೂರಾರು ಬೆಂಬಲಿಗರೊಂದಿಗೆ ಧರ್ಮಸ್ಥಳಕ್ಕೆ ಆಗಮಿಸಿದ ಶಾಸಕ ಎಚ್.ಕೆ. ಸುರೇಶ್, ಸಂಪ್ರದಾಯದಂತೆ ನೇತ್ರಾವತಿ ನದಿ ನೀರನ್ನು ಸಂಪ್ರೋಕ್ಷಣೆ ಮಾಡಿಕೊಂಡು ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿದರು. ಶಾಸಕರ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದ್ದು, ಇತ್ತೀಚೆಗೆ ಕೇಳಿಬಂದ ಅಡ್ಡ ಮತದಾನ ಆರೋಪದ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಭೇಟಿಯ ವೇಳೆ ಎಚ್.ಕೆ. ಸುರೇಶ್ ಅವರೊಂದಿಗೆ ಬೆಂಬಲಿಗರ ದೊಡ್ಡ ತಂಡವೂ ಉಪಸ್ಥಿತರಿತ್ತು.ರಾಜಕೀಯ ವಲಯದಲ್ಲಿ ಚರ್ಚೆ ಕೂಡ ಉಂಟಾಗಿದೆ.
ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪದ ಬೆನ್ನಲ್ಲೇ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿದ ಬೇಲೂರು ಬಿಜೆಪಿ ಶಾಸಕ ಎಚ್.ಕೆ. ಸುರೇಶ್, ತಮ್ಮ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸಂಘ ಪರಿವಾರದಿಂದ ಬೆಳೆದು ಬಂದಿರುವ ತಾವು ಹಿಂದುತ್ವದ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ತಮ್ಮ ಮೇಲೆ ಕಳಂಕ ತರುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ ಅವರು, ಮೊದಲು ಅಣ್ಣಪ್ಪ ಸ್ವಾಮಿಯ ದರ್ಶನ ಪಡೆದು ಬಳಿಕ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಆಣೆ-ಪ್ರಮಾಣ ಮಾಡಿದ್ದಾಗಿ ತಿಳಿಸಿದರು.
ಚುನಾವಣೆ ಮುಗಿದ ಮರುದಿನವೇ ಬಿಜೆಪಿ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು, ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೆ ಪತ್ರ ಬರೆದು ತಾವು ನಿಷ್ಠಾವಂತ ಕಾರ್ಯಕರ್ತ ಎಂದು ವಿವರಿಸಿದ್ದೇನೆ ಎಂದು ಹೇಳಿದರು.
ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕರ ಸಭೆ ಹಾಗೂ ಸಮೂಹ ಪ್ರಮಾಣ ಕಾರ್ಯಕ್ರಮ ನಡೆಯಬೇಕಿತ್ತು. ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರ ಅನುಮತಿ ಪಡೆದು ತಮ್ಮ ಕ್ಷೇತ್ರದ ಮುಖಂಡರೊಂದಿಗೆ ಬಂದು ದೇವರ ಮುಂದೆ ಪ್ರಮಾಣ ಮಾಡಿದ್ದೇನೆ ಎಂದು ಎಚ್.ಕೆ. ಸುರೇಶ್ ಹೇಳಿದರು. ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪದ ಬೆನ್ನಲ್ಲೇ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿದ ಬೇಲೂರು ಬಿಜೆಪಿ ಶಾಸಕ ಎಚ್.ಕೆ. ಸುರೇಶ್, ತಮ್ಮ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
“ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿರುವ ‘ಬುರುಡೆ ಗ್ಯಾಂಗ್’ಗೆ ಆ ಮಂಜುನಾಥ ಸ್ವಾಮಿಯೇ ಶಿಕ್ಷೆ ಕೊಡುತ್ತಾನೆ. ನಾನು ಯಾರಿಗೂ ಹೆದರಿಲ್ಲ. ನಿರ್ಭಯವಾಗಿ ದೇವರ ಮುಂದೆ ಆಣೆ-ಪ್ರಮಾಣ ಮಾಡಿದ್ದೇನೆ” ಎಂದು ಹೇಳಿದರು. “ನನ್ನ ಕ್ಷೇತ್ರಕ್ಕೆ ವಿಶ್ವನಾಯಕ ಪ್ರಧಾನಿ ನರೇಂದ್ರ ಮೋದಿ ಬಂದು ಪ್ರಚಾರ ಮಾಡಿದ್ದಾರೆ. ತಾಯಿಯಂತಿರುವ ಬಿಜೆಪಿ ಪಕ್ಷಕ್ಕೆ ನಾನು ಎಂದಿಗೂ ದ್ರೋಹ ಮಾಡಿಲ್ಲ. ಬಿ.ಎಸ್. ಯಡಿಯೂರಪ್ಪ ಅವರಂತಹ ಮಹಾನ್ ನಾಯಕರಿರುವ ಪಕ್ಷದಲ್ಲಿ ನಾನು ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ” ಎಂದರು.
ತಮ್ಮ ವಿರುದ್ಧದ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, “ಪಕ್ಷದ ಒಳಗೆ ಅಥವಾ ಹೊರಗೆ ಯಾರು ಈ ಷಡ್ಯಂತ್ರ ಮಾಡಿದ್ದಾರೆ ಎಂಬುದು ಪರಮಾತ್ಮನಿಗೆ ಗೊತ್ತು. ನಾನು ಯಾರ ಮೇಲೂ ಆರೋಪ ಅಥವಾ ಪ್ರತ್ಯಾರೋಪ ಮಾಡುವುದಿಲ್ಲ. ಎಲ್ಲದಕ್ಕೂ ಭಗವಂತನೇ ಸಾಕ್ಷಿ” ಎಂದು ಹೇಳಿದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಕಷ್ಟಪಟ್ಟು ಗೆದ್ದಿದ್ದೇನೆ. ಪಕ್ಷಭೇದವಿಲ್ಲದೆ ಕ್ಷೇತ್ರದ ಜನರ ಸೇವೆ ಮಾಡುತ್ತಿದ್ದೇನೆ. ವಿಧಾನಸಭೆಯಲ್ಲಿ ರಾತ್ರಿ 2 ಗಂಟೆಯವರೆಗೂ ಕುಳಿತು ರಾಜ್ಯ ಹಾಗೂ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದೇನೆ. ನನ್ನ ರಾಜಕೀಯ ಭವಿಷ್ಯಕ್ಕೆ ಕಪ್ಪುಚುಕ್ಕೆ ತರುವ ಉದ್ದೇಶದಿಂದಲೇ ಈ ಸುಳ್ಳು ಆರೋಪ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ಹಾಸನದ ಮಾಜಿ ಶಾಸಕರೊಬ್ಬರು ಈ ಬೆಳವಣಿಗೆಯ ಹಿಂದೆ ಇದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಎಚ್.ಕೆ. ಸುರೇಶ್, “ನಾನು ಯಾರ ಮೇಲೂ ಗೂಬೆ ಕೂರಿಸುವುದಿಲ್ಲ. ದೇವರ ಮುಂದೆ ನನ್ನ ಪ್ರಾಮಾಣಿಕತೆಯನ್ನಷ್ಟೇ ಪ್ರದರ್ಶಿಸಿದ್ದೇನೆ” ಎಂದು ಹೇಳಿದರು.



