ನ್ಯೂಯಾರ್ಕ್ : Meta ತನ್ನ ಜಾಗತಿಕ ಉದ್ಯೋಗಿಗಳಲ್ಲಿ ಸುಮಾರು ಸಿಬ್ಬಂದಿಯನ್ನು ಕಡಿತಗೊಳಿಸುವ ಪ್ರಕ್ರಿಯೆ ಆರಂಭಿಸಿದ್ದು, ಸುಮಾರು 8 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ಮೇಲೆ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.
ವರದಿಗಳ ಪ್ರಕಾರ, ಸಿಂಗಾಪುರ ಕಚೇರಿಯ ಉದ್ಯೋಗಿಗಳಿಗೆ ಮೊದಲ ಹಂತದಲ್ಲಿ ಬೆಳಗಿನ 4 ಗಂಟೆಗೆ ಇ-ಮೇಲ್ ಮೂಲಕ ಉದ್ಯೋಗ ಕಡಿತದ ಮಾಹಿತಿ ನೀಡಲಾಗಿದೆ. ಸಮಯ ವಲಯದ ಆಧಾರದ ಮೇಲೆ ವಿವಿಧ ದೇಶಗಳ ಉದ್ಯೋಗಿಗಳಿಗೆ ಹಂತ ಹಂತವಾಗಿ ಮಾಹಿತಿ ನೀಡಲಾಗುತ್ತಿದೆ ಎನ್ನಲಾಗಿದೆ.
ಉದ್ಯೋಗ ಕಡಿತದ ಜೊತೆಗೆ ಸುಮಾರು 7 ಸಾವಿರ ಸಿಬ್ಬಂದಿಯನ್ನು ಹೊಸ AI ಆಧಾರಿತ ತಂಡಗಳಿಗೆ ಮರು ನಿಯೋಜನೆ ಮಾಡುವ ಯೋಜನೆಯೂ ಕಂಪನಿಯಲ್ಲಿದೆ. ಈ ಕುರಿತು ಮೆಟಾದ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಜೆನೆಲ್ ಗೇಲ್ ಆಂತರಿಕ ನೋಟಿಸ್ನಲ್ಲಿ ಮಾಹಿತಿ ನೀಡಿದ್ದಾರೆ.
ಕಂಪನಿಯಲ್ಲಿ ನಿರ್ವಹಣಾ ಹುದ್ದೆಗಳ ಸಂಖ್ಯೆಯನ್ನು ಕಡಿಮೆ ಮಾಡಿ, ಸಣ್ಣ ತಂಡಗಳ ಮೂಲಕ ವೇಗವಾಗಿ ಕಾರ್ಯನಿರ್ವಹಿಸುವ ಮಾದರಿಯನ್ನು ಜಾರಿಗೆ ತರಲು ಮೆಟಾ ಮುಂದಾಗಿದೆ ಎಂದು ತಿಳಿದುಬಂದಿದೆ.
ಈ ಉದ್ಯೋಗ ಕಡಿತವು ಮುಖ್ಯವಾಗಿ ಎಂಜಿನಿಯರಿಂಗ್ ಮತ್ತು ಉತ್ಪನ್ನ ವಿಭಾಗದ ಸಿಬ್ಬಂದಿಗೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ. ಇದೇ ವರ್ಷ ಮತ್ತಷ್ಟು ಉದ್ಯೋಗ ಕಡಿತವೂ ಸಂಭವಿಸಬಹುದು ಎನ್ನಲಾಗಿದೆ.
ಇದರ ಜೊತೆಗೆ ಸಂಸ್ಥೆ ಸುಮಾರು 6 ಸಾವಿರ ಉದ್ಯೋಗಾವಕಾಶಗಳನ್ನು ಕೂಡ ರದ್ದುಗೊಳಿಸಿದೆ. AI ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಕಂಪನಿ ಮುಂದಾಗಿರುವ ಹಿನ್ನೆಲೆಯಲ್ಲಿ ಈ ಪುನರ್ರಚನೆ ನಡೆಯುತ್ತಿದೆ.
ಮಾರ್ಕ್ ಜುಕರ್ಬರ್ಗ್ ನೇತೃತ್ವದ ಮೆಟಾ ಕಂಪನಿ ಈ ವರ್ಷ AI ಅಭಿವೃದ್ಧಿಗೆ 125 ರಿಂದ 145 ಬಿಲಿಯನ್ ಡಾಲರ್ವರೆಗೆ ಹೂಡಿಕೆ ಮಾಡುವ ಯೋಜನೆ ಹೊಂದಿದೆ.
ಇತ್ತೀಚೆಗೆ ಕಂಪನಿ ಉದ್ಯೋಗಿಗಳ ಮೌಸ್ ಚಲನೆ ಮತ್ತು ಕೀಬೋರ್ಡ್ ಬಳಕೆಯನ್ನು ಟ್ರ್ಯಾಕ್ ಮಾಡುವ ಹೊಸ ಸಾಫ್ಟ್ವೇರ್ ಬಳಕೆ ಆರಂಭಿಸಿದೆ ಎಂಬ ವರದಿಗಳು ಹೊರಬಿದ್ದಿದ್ದು, ಇದಕ್ಕೆ ಉದ್ಯೋಗಿಗಳಿಂದ ವಿರೋಧ ವ್ಯಕ್ತವಾಗಿದೆ. ಸುಮಾರು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಈ ಕ್ರಮದ ವಿರುದ್ಧ ಮನವಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.


