ಧಾರವಾಡ : ಜಿಲ್ಲೆಯ ಅಳ್ನಾವರ ಸಮೀಪದ ಕಸ್ತೂರಬಾ ಬಾಲಕಿಯರ ವಸತಿ ಶಾಲೆಯಲ್ಲಿ 34 ವಿದ್ಯಾರ್ಥಿನಿಯರಲ್ಲಿ ಆತಂಕಕಾರಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.
ವಿದ್ಯಾರ್ಥಿನಿಯರು 10–15 ನಿಮಿಷಕ್ಕೊಮ್ಮೆ ಒದ್ದಾಡುವುದು, ಚೀರಾಡುವುದು ಸೇರಿದಂತೆ ವಿಚಿತ್ರ ಲಕ್ಷಣಗಳನ್ನು ತೋರಿಸುತ್ತಿದ್ದು, ಪೋಷಕರಲ್ಲಿ ಆತಂಕ ಮನೆ ಮಾಡಿದೆ.
ಪ್ರಾಥಮಿಕ ಮಾಹಿತಿಯಂತೆ, ವೈರಲ್ ಜ್ವರದ ಹಿನ್ನೆಲೆಯಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡಿದ್ದು, ಇನ್ಫ್ಲೂಯೆನ್ಸಾ A ಮತ್ತು B ಸೋಂಕಿನ ಶಂಕೆ ವ್ಯಕ್ತವಾಗಿದೆ. ಸೋಂಕಿತ 34 ಮಕ್ಕಳ ಪೈಕಿ 8 ವಿದ್ಯಾರ್ಥಿನಿಯರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದರಿಂದ ಅವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಕೆಲವರನ್ನು ಅಳ್ನಾವರ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ವಿದ್ಯಾರ್ಥಿನಿಯರು ಚಿಕಿತ್ಸೆ ಪಡೆಯುತ್ತಿರುವಾಗಲೂ ಒದ್ದಾಡುವುದು ಹಾಗೂ ಚೀರಾಡುತ್ತಿರುವ ದೃಶ್ಯಗಳು ಪೋಷಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ.
ಇದೇ ವೇಳೆ, ವಸತಿ ನಿಲಯದ ವಾರ್ಡನ್ ನಿರ್ಲಕ್ಷ್ಯದಿಂದ ಸೋಂಕು ಹಲವು ಮಕ್ಕಳಿಗೆ ಹರಡಿರಬಹುದು ಎಂಬ ಆರೋಪವೂ ಕೇಳಿಬಂದಿದೆ. ಘಟನೆ ಕುರಿತು ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ವಿದ್ಯಾರ್ಥಿನಿಯರ ಆರೋಗ್ಯ ಸಮಸ್ಯೆಗೆ ನಿಖರ ಕಾರಣ ಪತ್ತೆಹಚ್ಚಲು ವೈದ್ಯಕೀಯ ಪರೀಕ್ಷೆಗಳು ಮುಂದುವರಿದಿವೆ.


