ದಾವಣಗೆರೆ : ದಾವಣಗೆರೆಯ ಸರಸ್ವತಿ ನಗರದಲ್ಲಿರುವ ಪವರ್ ಫಿಟ್ನೆಸ್ ಕ್ಲಬ್ ಎದುರು ಶ್ರೀರಾಮ ಸೇನೆ, ಹಿಂದೂ ಜಾಗರಣ ವೇದಿಕೆ ಸೇರಿದಂತೆ ಹಲವು ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಮ್ ಟ್ರೈನರ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.
ಪ್ರತಿಭಟನಾಕಾರರ ಆರೋಪದ ಪ್ರಕಾರ, ಜಿಮ್ ಟ್ರೈನರ್ ಇಸ್ಮಾಯಿಲ್ ಅವರು ಹಿಂದೂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಬ್ರೈನ್‌ವಾಶ್ ಮಾಡಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಜೊತೆಗೆ ಜಿಮ್‌ನ ಡ್ರೆಸ್ಸಿಂಗ್ ರೂಮ್‌ಗಳಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿ ಮಹಿಳೆಯರ ವಿಡಿಯೊ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರತಿಭಟನೆಯ ವೇಳೆ ಕಾರ್ಯಕರ್ತರು ಜಿಮ್‌ನ ನಾಮಫಲಕವನ್ನು ಕಿತ್ತು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದಲ್ಲದೆ, ಕೆಲ ಮಹಿಳೆಯರು ಭಯದಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದು, ಆ ಪ್ರಕರಣಗಳನ್ನೂ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಜಿಲ್ಲೆಯಲ್ಲಿರುವ ಮುಸ್ಲಿಂ ಜಿಮ್ ಟ್ರೈನರ್‌ಗಳನ್ನು ತೆರವುಗೊಳಿಸುವಂತೆ ಹಾಗೂ ಪವರ್ ಫಿಟ್ನೆಸ್ ಕ್ಲಬ್ ಅನ್ನು ಶಾಶ್ವತವಾಗಿ ಮುಚ್ಚುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.


