ತುಮಕೂರು : ಜಾತ್ರೆಯಲ್ಲಿ ಪರಿಚಯವಾಗಿ ಪ್ರೀತಿಗೆ ತಿರುಗಿದ್ದ ಯುವತಿಯೊಂದಿಗೆ ಇನ್ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಯುವಕನನ್ನು ಪ್ರೇಯಸಿಯ ಹೆಸರಿನಲ್ಲಿ ಕರೆಸಿ ಅಮಾನುಷವಾಗಿ ಹಲ್ಲೆ ನಡೆಸಿದ ಆರೋಪ ತುಮಕೂರು ಜಿಲ್ಲೆಯಲ್ಲಿ ಕೇಳಿಬಂದಿದೆ.
ಗುಬ್ಬಿ ಪಟ್ಟಣದ ಹೊಸ ಕಾಲೋನಿ ನಿವಾಸಿ ಮೋಹಿತ್ (20) ಎಂಬಾತ ಹಲ್ಲೆಗೊಳಗಾದ ಯುವಕ. ಆತ ಗುಬ್ಬಿ ಪಟ್ಟಣ ಪಂಚಾಯ್ತಿಯಲ್ಲಿ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ.
ಮೋಹಿತ್ಗೆ ಸುಮಾರು ಎರಡು ತಿಂಗಳ ಹಿಂದೆ ಜಾತ್ರೆಯಲ್ಲಿ ಕುಣಿಗಲ್ ಮೂಲದ ಯುವತಿಯೊಂದಿಗೆ ಪರಿಚಯವಾಗಿದ್ದು, ಬಳಿಕ ಇಬ್ಬರೂ ಇನ್ಸ್ಟಾಗ್ರಾಂ ಮೂಲಕ ನಿರಂತರ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ. ಈ ವಿಚಾರ ಯುವತಿಯ ಮನೆಯವರಿಗೆ ತಿಳಿದ ಬಳಿಕ, ಯುವತಿಯ ಮೊಬೈಲ್ನಿಂದಲೇ ಸಂದೇಶ ಕಳುಹಿಸಿ ಕುಣಿಗಲ್ಗೆ ಬರುವಂತೆ ಮೋಹಿತ್ನನ್ನು ಕರೆಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರೇಯಸಿಯೇ ಸಂದೇಶ ಕಳುಹಿಸಿದ್ದಾಳೆ ಎಂದು ನಂಬಿದ ಮೋಹಿತ್ ಕುಣಿಗಲ್ಗೆ ತೆರಳಿದ್ದಾನೆ. ಈ ವೇಳೆ ಆತನನ್ನು ತೋಟದ ಮನೆಗೆ ಕರೆದುಕೊಂಡು ಹೋಗಿ ಯುವತಿಯ ಪೋಷಕರು ಹಾಗೂ ಇತರರು ದೊಣ್ಣೆ ಮತ್ತು ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸುಮಾರು ನಾಲ್ಕೈದು ಗಂಟೆಗಳ ಕಾಲ ಹಲ್ಲೆ ನಡೆಸಿದ್ದು, ಈ ವೇಳೆ ಕೈ, ಕಾಲು ಹಾಗೂ ಸೊಂಟದ ಮೂಳೆಗಳಿಗೆ ಗಂಭೀರ ಗಾಯಗಳಾಗಿವೆ ಎಂದು ಹೇಳಲಾಗಿದೆ. ಅಲ್ಲದೆ, ಘಟನೆ ಕುರಿತು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಗಾಯಗೊಂಡ ಮೋಹಿತ್ ಬಳಿಕ ಬೈಕ್ನಲ್ಲಿ ಗುಬ್ಬಿಗೆ ವಾಪಸಾಗಿ ಚಿಕಿತ್ಸೆ ಪಡೆದಿದ್ದು, ನಂತರ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಸಂಬಂಧ ಮೋಹಿತ್ ಪೋಷಕರು ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಯುವತಿಯ ಪೋಷಕರ ವಿರುದ್ಧ ಹಲ್ಲೆ ಆರೋಪಿಸಿ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದ್ದಾರೆ. ದೂರು ಆಧರಿಸಿ ಕುಣಿಗಲ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

