ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭಾನುವಾರ ಮಧ್ಯಾಹ್ನ ಧಾರಾಕಾರ ಮಳೆ ಸುರಿದಿದ್ದು, ಗಿರಿ ಪ್ರದೇಶಗಳು ಮಂಜು ಹಾಗೂ ಚಳಿಯ ವಾತಾವರಣದಿಂದ ಕಂಗೊಳಿಸಿವೆ. ಕಳೆದ 30 ನಿಮಿಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ಸುರಿದ ಮಳೆಯಿಂದ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ತಂಪಿನ ವಾತಾವರಣಕ್ಕೆ ಸಾಕ್ಷಿಯಾದವು.
ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಹಾಗೂ ದತ್ತಪೀಠ ಸುತ್ತಮುತ್ತ ಭಾರಿ ಮಳೆಯಾಗಿದ್ದು, ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಆಗಮಿಸಿದ್ದ ಸಾವಿರಾರು ಪ್ರವಾಸಿಗರು ಮಳೆಯ ನಡುವೆಯೇ ಪ್ರಕೃತಿ ಸೌಂದರ್ಯವನ್ನು ಸವಿದು ಸಂಭ್ರಮಿಸಿದರು. ಚುಮುಚುಮು ಚಳಿ ಮತ್ತು ಮಂಜಿನ ವಾತಾವರಣ ಪ್ರವಾಸಿಗರನ್ನು ಆಕರ್ಷಿಸಿದ್ದು, ಗಿರಿ ಪ್ರದೇಶಗಳು ಪ್ರವಾಸಿಗರಿಂದ ಕಿಕ್ಕಿರಿದು ಕಂಡುಬಂದವು.
ಚಿಕ್ಕಮಗಳೂರು ತನ್ನ ಹಸಿರು ಬೆಟ್ಟಗಳು, ಕಾಫಿ ತೋಟಗಳು ಮತ್ತು ಮಲೆನಾಡಿನ ಸೊಬಗಿನಿಂದ ಪ್ರವಾಸಿಗರ ನೆಚ್ಚಿನ ತಾಣವಾಗಿ ಗುರುತಿಸಿಕೊಂಡಿದೆ. ನಿರಂತರ ಮಳೆಯಿಂದ ಕೆಲವೆಡೆ ವಾಹನ ಸವಾರರು ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಆಶ್ರಯ ಪಡೆಯುವಂತಾಯಿತು. ಆದರೆ ಮಳೆಯ ನಡುವೆಯೂ ಪ್ರವಾಸಿಗರು ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಂಡು ಫೋಟೋ ಹಾಗೂ ವಿಡಿಯೋಗಳನ್ನು ಸೆರೆಹಿಡಿಯುತ್ತಿದ್ದರು. ಇದೀಗ ರಾಜ್ಯದ ಹಲವು ಭಾಗಗಳಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ಕರ್ನಾಟಕದಲ್ಲಿ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ


