ಬಂಟ್ವಾಳ : ದ್ವಿಚಕ್ರವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಿಂತಿದ್ದ ಶಾಲಾ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಜನವರಿ 4 ರ ಬುಧವಾರದಂದು ವಿಟ್ಲದ ಒಕ್ಕೆತ್ತೂರಿನಲ್ಲಿ ಅಪಘಾತ ಸಂಭವಿಸಿದೆ.
ವಿಟ್ಲದ ಒಕ್ಕೆತ್ತೂರು ನಿವಾಸಿ ಬಶೀರ್ ಎಂಬವರ ಪುತ್ರಿ ಫಾತಿಮತ್ ನಿದಾ ಎಂಬಾಕೆಯೇ ಬಾಲಕಿ. ಈಕೆ ವಿಟ್ಲ ಮಾದರಿ ಶಾಲೆಯಲ್ಲಿ ಐದನೇ ತರಗತಿ ಓದುತ್ತಿದ್ದಾಳೆ.
ಶಾಲೆಗೆ ಹೋಗಲು ರಸ್ತೆ ಬದಿಯಲ್ಲಿ ಆಟೋ ರಿಕ್ಷಾಕ್ಕಾಗಿ ಕಾಯುತ್ತಿದ್ದ ಆಕೆಗೆ ವಿಟ್ಲ ಕಡೆಯಿಂದ ಬಂದ ಬೈಕ್ ಡಿಕ್ಕಿ ಹೊಡೆದು ದೂರದವರೆಗೆ ಎಳೆದೊಯ್ದಿದೆ. ಅಕ್ಕಪಕ್ಕದಲ್ಲಿದ್ದವರು ಕೂಡಲೇ ಬಾಲಕಿಯನ್ನು ಪುತ್ತೂರಿನ ಆಸ್ಪತ್ರೆಗೆ ಸಾಗಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ವಿಟ್ಲ-ಕಲ್ಲಡ್ಕ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣದ ನಂತರ ಇಲ್ಲಿ ವಾಹನಗಳು ಅತಿವೇಗದಿಂದ ಓಡುತ್ತಿವೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.