ಉಳ್ಳಾಲ: ನ.19
ದ್ವಿಚಕ್ರ ವಾಹನ ಸವಾರರನ್ನ ತಡೆದ ದುಷ್ಕರ್ಮಿಗಳು ಹಿಂದಿ ಭಾಷೆಯಿಂದ ಅವಾಚ್ಯ ಶಬ್ದಗಳಿಂದ ನಿಂದಿಸಿ ರಾಡಿಂದ ಹಲ್ಲೆಗೈದು ಏಕಕಾಲದಲ್ಲಿ ಎರಡು ಸ್ಕೂಟರ್ ದರೋಡೆಗೈದ ಘಟನೆ ರಾ.ಹೆ.66ರ ಅಂಬಿಕಾರೋಡ್ ಮತ್ತು ಉಚ್ಚಿಲ ಎಂಬಲ್ಲಿ ನಡೆದಿದೆ.
ಗುರುವಾರ ರಾತ್ರಿ 11.10 ರ ಸಮಯದಲ್ಲಿ ತಲಪಾಡಿ,ನಾರ್ಲಗುತ್ತು ನಿವಾಸಿ ಹರ್ಷಿತ್ ಎಂಬವರು ಔಷಧಿ ಖರೀದಿಸಲು ಮಂಗಳೂರಿನ ಗಣೇಶ್ ಮೆಡಿಕಲ್ಗೆ ತಮ್ಮ ಆ್ಯಕ್ಸಸ್ 125 ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಉಚ್ಚಿಲ ಬಸ್ ಸ್ಟಾಪ್ ಬಳಿಯಲ್ಲಿದ್ದ ಮೂರು ಜನ ಅಪರಿಚಿತ ವ್ಯಕ್ತಿಗಳು ಕೈ ಸನ್ನೆ ಮಾಡಿ ತಡೆದಿದ್ದಾರೆ.ಮೂವರು ಅಪರಿಚಿತರು ಹರ್ಷಿತ್ಗೆ ಹಿಂದಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದದಲ್ಲದೆ,ಒರ್ವನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡ್ ನಿಂದ ಎಡಭುಜಕ್ಕೆ ಹೊಡೆದು ಗಾಯಗೊಳಿಸಿ ಸ್ಕೂಟರನ್ನ ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಅದೇ ದಿನ ರಾತ್ರಿ 11.30 ರ ವೇಳೆ ಮಂಜೇಶ್ವರ ನಿವಾಸಿ ಪ್ರಫುಲ್ ರಾಜ್ ಎಂಬವರು ಕುತ್ತಾರು ,ಪಂಡಿತ್ ಹೌಸ್ನ ತನ್ನ ಅಜ್ಜಿ ಮನೆಗೆ ಟಿವಿಎಸ್ N.ಟಾರ್ಕ್ ಸ್ಕೂಟರಲ್ಲಿ ಹೆದ್ದಾರಿಯಲ್ಲಿ ತೆರಳುತ್ತಿದ್ದ ವೇಳೆ ಅಂಬಿಕಾರೋಡ್ ಗಟ್ಟಿ ಸಮಾಜ ಭವನದ ಬಳಿ 3 ಜನ ಆಗಂತುಕರು ತಡೆದಿದ್ದಾರೆ.ಆಗಂತುಕರು ಪ್ರಪುಲ್ ರಾಜನ್ನ ಉದ್ದೇಶಿಸಿ ಅರೆ ಸಾಲೆ, ರುಕ್ ರುಕ್ ಎಂದು ಹಿಂದಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಹಲ್ಲೆ ನಡೆಸಿದ್ದಾರೆ.ಆರೋಪಿಗಳ ಪೈಕಿ ಒಬ್ಬಾತನು ಕಬ್ಬಿಣದ ಸರಳಿನಿಂದ ಪ್ರಪುಲ್ನ ಎಡಭುಜಕ್ಕೆ ಹೊಡೆದು ಹಲ್ಲೆ ನಡೆಸಿ ಸ್ಕೂಟರನ್ನ ದರೋಡೆಗೈದಿದ್ದಾರೆ.
ದರೋಡೆಯಿಂದ ಗಾಯಗೊಂಡ ಹರ್ಷಿತ್ ಮತ್ತು ಪ್ರಪುಲ್ ರಾಜ್ ತೊಕ್ಕೊಟುವಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು,ಅವರ ದೂರಿನ ಮೇರೆಗೆ ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.