ಮಂಗಳೂರು, ಜ.2: ಇಲ್ಲಿನ ತಣ್ಣೀರಭಾವಿ ಬೀಚ್‌ನಲ್ಲಿ ಟ್ರಾಫಿಕ್ ತಡೆ ತೆರವುಗೊಳಿಸಲು ಯುವಕರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಪೊಲೀಸರ ದೌರ್ಜನ್ಯದ ವೇಳೆ 6 ನೇ ತರಗತಿಯ ವಿದ್ಯಾರ್ಥಿ ಮತ್ತು ಪಿಯು ವಿದ್ಯಾರ್ಥಿಗಳು ಕೂಡ ಬಾಸುಂಡೆ ಬಿಳುವ ಹೊಡೆತಗಳನ್ನು ತಿಂದಿದ್ದಾರೆ ಎಂದು ವರದಿಯಾಗಿದೆ. ಈ ಸಂದರ್ಭದಲ್ಲಿ ಸ್ಥಳೀಯರು ಪೊಲೀಸರ ನಡುವೆ ಜಟಾಪಟಿ ನಡೆದಿದ್ದು ಸಾರ್ವಜನಿಕರು ಪೋಲಿಸರನ್ನು ತರಾಟೆಗೆ ತೆಗೆದುಕೊಂಡರು.
ಸ್ಥಳೀಯರ ಪ್ರಕಾರ, ವಾರಾಂತ್ಯ ಮತ್ತು ಹೊಸ ವರ್ಷವಾದ್ದರಿಂದ ತಣ್ಣೀರಭಾವಿ ಬೀಚ್‌ಗೆ ಭಾನುವಾರ ಹೆಚ್ಚಿನ ಸಂದರ್ಶಕರ ನೂಕುನುಗ್ಗಲು ಇತ್ತು. ಹೀಗಾಗಿ ಶನಿವಾರದಿಂದಲೇ ಬೀಚ್‌ಗೆ ಹೋಗುವ ರಸ್ತೆಯನ್ನು ನಿರ್ಬಂಧಿಸಲಾಗಿದೆ. ಆದರೆ, ಟ್ರಾಫಿಕ್ ಜಾಮ್‌ಗೆ ಕಾರಣ ಎಂದು ಆರೋಪಿಸಿ ಭಾನುವಾರ ಸಂಜೆ ಕ್ರಿಕೆಟ್ ಆಡಿ ಹಿಂತಿರುಗುತ್ತಿದ್ದ ಯುವಕರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು.
6ನೇ ತರಗತಿ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಸಾರ್ವಜನಿಕರು ಪೊಲೀಸರಿಗೆ ಘೇರಾವ್ ಹಾಕಿದ್ದು, ಮೂವರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಶಾಸಕ ವೇದವ್ಯಾಸ್ ಕಾಮತ್ ಮೂಲಕ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಮೂವರು ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.