Sunday, March 16, 2025
Flats for sale
Homeರಾಜ್ಯಮೈಸೂರು: ಬಂಡೀಪುರದಲ್ಲಿ ಇನ್ನು ರಾತ್ರಿ ಸಂಚಾರ ನಿಷೇಧ ಸಾಧ್ಯತೆ !

ಮೈಸೂರು: ಬಂಡೀಪುರದಲ್ಲಿ ಇನ್ನು ರಾತ್ರಿ ಸಂಚಾರ ನಿಷೇಧ ಸಾಧ್ಯತೆ !

ಮೈಸೂರು: ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದುಹೋಗುವ ಕೊಳ್ಳೇಗಾಲ-ಕೋಝಿಕ್ಕೋಡ್ ರಾಷ್ಟ್ರೀಯ ಹೆದ್ದಾರಿ 766 ರ ರಾತ್ರಿ ಪ್ರಯಾಣ ನಿಷೇಧದ ಸಮಯವನ್ನು ವಿಸ್ತರಿಸಲು ಕರ್ನಾಟಕ ಅರಣ್ಯ ಇಲಾಖೆ ಚಿಂತನೆ ನಡೆಸಿದೆ. ಮೊನ್ನೆ ತಾನೇ ಲಾರಿ ಒಂದು ಹೆಣ್ಣು ಆನೆಗೆ ಡಿಕ್ಕಿ ಹೊಡೆದ ಕಾರಣ ಹಾಗೂ ರಾತ್ರೆ ವೇಳೆ ಕಾಡು ಪ್ರಾಣಿಗಳು ರಸ್ತೆಯಲ್ಲಿ ಸಂಚಾರ ಮಾಡುವುದರಿಂದ ಈ ನಿರ್ಧಾರ ತೆಗೆಯಲಾಗಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ.

ಈ ಮಾರ್ಗದಲ್ಲಿ ರಾತ್ರಿ ಪ್ರಯಾಣ ನಿಷೇಧವು ರಾತ್ರಿ 9 ರಿಂದ ಬೆಳಗ್ಗೆ 6 ರವರೆಗೆ ಇರುತ್ತದೆ. ಹಲವಾರು ಪರಿಸರವಾದಿಗಳು ಪ್ರಯಾಣ ನಿಷೇಧದ ಸಮಯವನ್ನು 12 ಗಂಟೆಗಳವರೆಗೆ ಹೆಚ್ಚಿಸಲು ವಿನಂತಿಸಿದ್ದಾರೆ. ಹೀಗಾಗಿ ಈ ರೀತಿ ಅತಿವೇಗ ಮತ್ತು ಅಜಾಗರೂಕತೆಯಿಂದ ಸಂಚರಿಸುವ ವಾಹನಗಳಿಗೆ ಕಡಿವಾಣ ಹಾಕುವುದಕ್ಕಾಗಿ ರಾತ್ರಿ ಸಂಚಾರ ನಿಷೇಧ ಅವಧಿಯನ್ನು ಪರಿಷ್ಕರಿಸಬೇಕು. ಈಗಿನ ಸಂಚಾರ ನಿಷೇಧ ಸಮಯ ರಾತ್ರಿ 9ರಿಂದ ಬೆಳಗ್ಗೆ 6ರ ಬದಲಾಗಿ ಸಂಜೆ 6ರಿಂದ ಬೆಳಗ್ಗೆ 6ರವರೆಗೆ ನಿಗದಿಪಡಿಸಬೇಕು. ಎಲ್ಲ ವಾಹನಗಳಿಗೆ ಆಗದಿದ್ದರೂ, ಸರಕು ಸಾಗಣೆಯ ಭಾರಿ ವಾಹನಗಳಿಗೆ ಹೊಸ ಸಮಯ ನಿಗದಿಪಡಿಸಬೇಕು ಎಂಬುದು ಪರಿಸರವಾದಿಗಳ ಬೇಡಿಕೆ.

ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಸಂಚಾರ ನಿಷೇಧದ ಸಮಯ ನಿಗದಿ ಮಾಡುವಂತೆ ರಾಜ್ಯ ಸರಕಾರಕ್ಕೆ ಮನವಿ ಪತ್ರ ರವಾನಿಸಲಾಗುವುದು ಎಂದು ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಪಿ.ರಮೇಶ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಯಾಕೆ ಈ ಪ್ರಯಾಣ ನಿಷೇಧ ಅವಧಿ ವಿಸ್ತರಣೆಯ ಚಿಂತನೆ?

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 766ರ ಮದ್ದೂರು ವಲಯದಲ್ಲಿ ಮಂಗಳವಾರ ರಾತ್ರಿ ಲಾರಿ ಡಿಕ್ಕಿ ಹೊಡೆದು ಹೆಣ್ಣಾನೆ ಮೃತಪಟ್ಟಿದೆ. ಇದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇದು ಅರಣ್ಯ ಪ್ರದೇಶವಾಗಿರುವ ಕಾರಣ ಅಲ್ಲಲ್ಲಿ, ಜಾಗರೂಕತೆಯಿಂದ ವಾಹನ ಚಲಾಯಿಸುವಂತೆ ಎಚ್ಚರಿಸುವ ಎಚ್ಚರಿಕೆ ಫಲಕ ಲಗತ್ತಿಸಲಾಗಿದೆ. ಆದರೂ, ವಾಹನ ಚಾಲಕರು ಅಜಾಗರೂಕತೆ, ಅತಿ ವೇಗದಿಂದ ವಾಹನ ಚಲಾಯಿಸುತ್ತಾರೆ.

ಬಂಡೀಪುರದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು

ಬಂಡೀಪುರದಲ್ಲಿ ಊಟಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 67 ಹಾಗೂ ಕೇರಳದ ಸುಲ್ತಾನ್‌ ಬತ್ತೇರಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 766 – ಹೀಗೆ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತವೆ. ಹುಲಿ ಸೇರಿ ಇತರ ವನ್ಯಜೀವಿಗಳ ರಕ್ಷಣೆ ಹಾಗೂ ಮಾನವ ವನ್ಯ ಜೀವಿ ಸಂಘರ್ಷ ಉದ್ದೇಶದಿಂದ ರಾಜ್ಯ ಸರ್ಕಾರ 2009ರಲ್ಲಿ ಎರಡೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ವಾಹನಗಳ ಸಂಚಾರ ನಿಷೇಧಿಸಿತ್ತು. ಅದು ಈಗಲೂ ಚಾಲ್ತಿಯಲ್ಲಿದೆ. ಸಾರಿಗೆ ಬಸ್‌ ಹಾಗೂ ಆಂಬುಲೆನ್ಸ್‌ ಸೇರಿ ಇತರೆ ತುರ್ತು ವಾಹನಗಳಿಗೆ ಇದರಿಂದ ವಿನಾಯಿತಿ ಇದೆ. ಈ ನಿರ್ಧಾರ ಫಲಪ‍್ರದ ವಾಗಿದ್ದು, ದೊಡ್ಡ ಪ್ರಾಣಿಗಳು ವಾಹನ ಡಿಕ್ಕಿ ಹೊಡೆದು ಮೃತಪಟ್ಟ ಪ್ರಕರಣ ವರದಿಯಾಗಿರಲಿಲ್ಲ.

ಬಂಡೀಪುರದಲ್ಲಿ ಸಾಗುವ ಊಟಿ ರಸ್ತೆಗೆ ಹೋಲಿಸಿದರೆ ಕೇರಳದ ಕಡೆಗೆ ಹೋಗುವ ರಸ್ತೆ ಹೆಚ್ಚು ಅಗಲವಾಗಿದೆ. ಇಲ್ಲಿ ರಸ್ತೆ ಹಂಪ್‌ಗಳೂ ಕಡಿಮೆ ಇವೆ. ಹೀಗಾಗಿ ವಾಹನಗಳ ವೇಗ ಹೆಚ್ಚಿರುತ್ತದೆ. ಮದ್ದೂರು ಚೆಕ್‌ಪೋಸ್ಟ್‌ನಿಂದ ಕೇರಳದ ಗಡಿಯಲ್ಲಿರುವ ಮೂಲೆಹೊಳೆ ಚೆಕ್‌ಪೋಸ್ಟ್‌ವರೆಗೆ 18 ಕಿ.ಮೀ ದೂರ ಇದ್ದು, ಅಂದಾಜು 30 ರಸ್ತೆ ಹಂಪ್‌ಗಳಿವೆ. ಇದುವೇ, ಊಟಿ ರಸ್ತೆಯಲ್ಲಿ ಮೇಲುಕಾಮನಹಳ್ಳಿಯಿಂದ ಕೆಕ್ಕನಹಳ್ಳ ಚೆಕ್‌ಪೋಸ್ಟ್‌ವರೆಗೆ 13 ಕಿ.ಮೀ ಇದ್ದರೂ, 50ಕ್ಕೂ ಹೆಚ್ಚು ರಸ್ತೆ ಹಂಪ್‌ಗಳಿವೆ ಎಂಬ ಅಂಶದ ಕಡೆಗೆ ಪರಿಸರವಾದಿಗಳು ಗಮನಸೆಳೆದಿದ್ದಾರೆ.

ಹೀಗಾಗಿ ಪ್ರಯಾಣ ನಿಷೇಧದ ಕಾಲಮಿತಿಯನ್ನು ಹೆಚ್ಚಿಸಲು ಆಗ್ರಹ ಹೆಚ್ಚಿರುವ ಕಾರಣ, ಅರಣ್ಯ ಇಲಾಖೆಯು ಸಮಗ್ರ ವರದಿ ತಯಾರಿಸಿ ಪ್ರಯಾಣ ನಿಷೇಧ ಅವಧಿ ವಿಸ್ತರಣೆಗೆ ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದು ಪಿ ರಮೇಶ್ ಕುಮಾರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular