ಉಳ್ಳಾಲ : ದೇಶಾದ್ಯಂತ ಗೋ ಮಾಂಸಾಚರಣೆಯೇ ಮೇಳೈಸುತ್ತಿರುವ ಸಂದರ್ಭದಲ್ಲಿ ಪುಣ್ಯಕೋಟಿನಗರದ ಗೋ ಸೇವಾ ಮಾಸಾಚರಣೆ ಎಂಬುದು ಹೊಸ ಪ್ರಯೋಗ ಎಂದು ಮುಂಬೈ ಉದ್ಯಮಿ ಸದಾಶಿವ ಶೆಟ್ಟಿ ಕೂಳೂರು,ಕನ್ಯಾನ ಅವರು ಅಭಿಪ್ರಾಯ ಪಟ್ಟರು.

ಅವರು ಕೈರಂಗಳದ, ಪುಣ್ಯಕೋಟಿನಗರದಲ್ಲಿರುವ ಅಮೃತಧಾರಾ ಗೋಶಾಲೆಯಲ್ಲಿ ಜ.14 ರಿಂದ ಪೆ. 13 ರ ವರಗೆ ಒಂದು ತಿಂಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಡೆಯಲಿರುವ ಗೋಸೇವಾ ಮಾಸಾಚರಣೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಗೋವಿಗೆ ಸನಾತನ ಹಿಂದೂ ಧರ್ಮದಲ್ಲಿ ಅತ್ಯಂತ ಮಹತ್ವತೆ ಇದೆ.ಇಂದು ಕಾಲ ಬದಲಾಗುತ್ತಿದ್ದು ಎಲ್ಲಿಯೂ ಗೋವಿನ ಸೇವಾ ಮಾಸಾಚರಣೆ ನಡೆಯುತ್ತಿಲ್ಲ. ಬದಲಾಗಿ ದೇಶದ ಮೂಲೆ,ಮೂಲೆಯಲ್ಲೂ ಗೋ ಮಾಂಸಾಚರಣೆಯೇ ನಡೆಯುತ್ತಿದೆ.ಗೋವು ಎಂದರೆ ಮುಗ್ಧ ಹಾಗೂ ಪಾವಿತ್ರ್ಯವುಳ್ಳ ದೇವತೆ.ಅಂತಹ ಗೋವಿನ ರಕ್ಷಣೆ ನಮ್ಮೆಲ್ಲರ ಜವಬ್ದಾರಿಯಾಗಿದ್ದು ಪುಣ್ಯಕೋಟಿನಗರದಲ್ಲಿ ನಡೆಯುತ್ತಿರುವ ಗೋ ಸೇವಾ ಮಾಸಾಚರಣೆಯಂತಹ ಈ ಕಾರ್ಯಕ್ರಮದ ಮೂಲಕ ಗೋವಿನ ಸಂರಕ್ಷಣೆಗಾಗಿ ಪಣತೊಡೋಣ ಎಂದು ಕರೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಮನೆಯಲ್ಲಿ ಎಷ್ಟು ಗೋವುಗಳಿವೋ ಅದಕ್ಕೆ ಅನುಸಾರವಾಗಿ ವ್ಯಕ್ತಿಯ ಶ್ರಿಮಂತಿಕೆಯನ್ನು ಗುರುತಿಸುತ್ತಿದ್ದರು.ಆದರೆ ಈಗ ಕಾರು ಬಂಗಲೆಯ ಮೂಲಕ ಶ್ರೀಮಂತಿಕೆಯನ್ನು ಗುರುತಿಸುವಂತಾಗಿದೆ.ಗೋವಿಗೆ ನಮ್ಮ ಮನೆಯಲ್ಲಿ ಮಾತ್ರವಲ್ಲದೆ ನಮ್ಮ ಮನದಲ್ಲೂ ಜಾಗ ಕೊಡಬೇಕು. ಪುಣ್ಯಕೋಟಿನಗರದಲ್ಲಿ ನಡೆಯುವ ಗೋಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯ ಮುನ್ನ ಮುಡಿಪುವಿನಿಂದ ಹೂಹಾಕುವ ಕಲ್ಲು ಮಾರ್ಗವಾಗಿ ಕೈರಂಗಳ ಪುಣ್ಯಕೋಟಿನಗರದವರೆಗೆ ಭವ್ಯವಾದ ಶೋಭಾಯಾತ್ರೆಯು ವಿವಿಧ ಸಾಂಸ್ಕೃತಿಕ ವೈಭವದೊಂದಿಗೆ ನಡೆಯಿತು.ಟ್ರಕ್ ಗಳಲ್ಲಿ ನೂರಾರು ರಾಧಾ ಕೃಷ್ಣ ವೇಷಧಾರಿ ಮಕ್ಕಳು, ನೂರಾರು ಮಂದಿ ಕುಣಿತ ಭಜಕರು ಶೋಭಾಯಾತ್ರೆಗೆ ಮೆರುಗು ನೀಡಿದರು.
ಒಂದು ತಿಂಗಳ ಕಾಲ ನಡೆಯೋ ಗೋ ಸೇವಾ ಮಾಸಾಚರಣೆಯಲ್ಲಿ ಗೋ ಪ್ರೇಮಿಗಳು ಗೋಶಾಲೆಗೆ ಭೇಟಿ ನೀಡಿ ವಿವಿಧ ರೀತಿಯಲ್ಲಿ ಗೋ ಸೇವೆಯನ್ನ ನಡೆಸಬಹುದಾಗಿದೆ.
ಗೋಮಾಸಾಚರಣೆ ಸಂಚಾಲಕ ಟಿ.ಜಿ ರಾಜಾರಾಮ್ ಭಟ್,ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಹಿಂದೂ ಜಾಗರಣ ವೇದಿಕೆಯ ನರಸಿಂಹ ಮಾಣಿ , ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್ ಮೊದಲಾದವರು ಉಪಸ್ಥಿತರಿದ್ದರು.