ಗೋವಾ : ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮುಂಬೈ-ಗೋವಾ ಹೆದ್ದಾರಿಯಲ್ಲಿ ಗುರುವಾರ ಬೆಳಿಗ್ಗೆ ವೇಗವಾಗಿ ಬಂದ ಟ್ರಕ್ ವ್ಯಾನ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಮಗು ಗಾಯಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಬೈನಿಂದ 130 ಕಿ.ಮೀ ದೂರದಲ್ಲಿರುವ ರಾಯಗಢದ ರೆಪೋಲಿ ಗ್ರಾಮದಲ್ಲಿ ಮುಂಜಾನೆ 4.45ಕ್ಕೆ ಅಪಘಾತ ಸಂಭವಿಸಿದೆ.
ಸಂತ್ರಸ್ತರು, ಎಲ್ಲಾ ಸಂಬಂಧಿಕರು ವ್ಯಾನ್‌ನಲ್ಲಿ ರತ್ನಗಿರಿ ಜಿಲ್ಲೆಯ ಗುಹಾಗರ್‌ಗೆ ಹೋಗುತ್ತಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ್ ಘರ್ಗೆ ತಿಳಿಸಿದ್ದಾರೆ. ಟ್ರಕ್ ಮುಂಬೈ ಕಡೆಗೆ ಹೋಗುತ್ತಿತ್ತು ಎಂದು ಅವರು ಹೇಳಿದರು.
“ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಹೆಣ್ಣು ಮಗು, ಮೂವರು ಮಹಿಳೆಯರು ಮತ್ತು ಐದು ಪುರುಷರು ಸೇರಿದ್ದಾರೆ” ಎಂದು ಅಧಿಕಾರಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಅವರು ಹೇಳಿದರು. ಅಪಘಾತದಲ್ಲಿ ಗಾಯಗೊಂಡ ನಾಲ್ಕು ವರ್ಷದ ಬಾಲಕಿಯನ್ನು ಮಂಗಾಂವ್‌ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿದರು. ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.