ಬೆಂಗಳೂರು: ಜೆಡಿಎಸ್ ವರಿಷ್ಠ ಹೆಚ್‌ಡಿ ಮಾಜಿ ಪ್ರಧಾನಮಂತ್ರಿ ದೇವೇಗೌಡ ಅವರು ಇಂದು(ಡಿ.13-ಮಂಗಳವಾರ) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿದ್ದಾರೆ. ಈ ವೇಳೆ ಹಲವು ಬೇಡಿಕೆಗಳನ್ನು ಪ್ರಧಾನಿ ಮೋದಿ ಅವರಿಗೆ ಸಲ್ಲಿಸಿರುವ ಹೆಚ್‌ಡಿ ದೇವೇಗೌಡ, ಈ ಬೇಡಿಕೆಗಳ ಬಗ್ಗೆ ಪ್ರಧಾನಿ ಮೋದಿ ಅವರಿಂದ ಪರಿಗಣನೆಯ ಭರವಸೆ ಪಡೆದುಕೊಂಡಿದ್ದಾರೆ.
ಹಾಸನ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಯೋಜನೆ, ಅಂತರ್ ರಾಜ್ಯ ನದಿಗಳಾದ ಕಾವೇರಿ, ಕೃಷ್ಣಾ, ಮಹದಾಯಿ ನೀರು ಹಂಚಿಕೆ, ಒಬಿಸಿಯ ಕೇಂದ್ರ ಪಟ್ಟಿಯಲ್ಲಿ ಕುಂಚಿಟಿಗರನ್ನು ಒಕ್ಕಲಿಗ ಉಪಜಾತಿಯಾಗಿ ಸೇರಿಸುವುದು ಕುರಿತಂತೆ, ಇನ್ನೂ ಹಲವು ಬೇಡಿಕೆಗಳ ಪಟ್ಟಿಯಲ್ಲಿ ಹೆಚ್‌ಡಿ ದೇವೇಗೌಡ ಅವರು ಪ್ರಧಾನಿ ಮೋದಿ ಅವರಿಗೆ ಸಲ್ಲಿಸಿದ್ದಾರೆ.
ಈ ಕುರಿತು ಖುದ್ದು ಮಾಹಿತಿ ನೀಡಿರುವ ಹೆಚ್‌ಡಿ ದೇವೇಗೌಡ, ನನ್ನ ಜ್ಞಾಪಕ ಪತ್ರದಲ್ಲಿ ನದಿ ನೀರಾವರಿ, ಕುಂಚಿಟಿಗರನ್ನು ಒಕ್ಕಲಿಗೆ ಉಪಜಾತಿಯಾಗಿ ಸೇರಿಸುವುದು ಮತ್ತಿತರ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ ಈ ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಂಡು ಆದಷ್ಟು ಶೀಘ್ರವಾಗಿ ಈ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಪ್ರಧಾನಿ ಮೋದಿ ತಮಗೆ ಭರವಸೆ ನೀಡಿದ್ದಾರೆ ಎಂದು ಹೆಚ್‌ಡಿ ದೇವೇಗೌಡ ತಿಳಿಸಿದರು.
ಇನ್ನು ತಮ್ಮನ್ನು ಭೇಟಿಯಾಗಲು ಬಂದ ಮಾಜಿ ಪ್ರಧಾನಮಂತ್ರಿ ಹೆಚ್‌ಡಿ ದೇವೇಗೌಡ ಅವರನ್ನು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆತ್ಮೀಯವಾಗಿ ಸ್ವಾಗತಿಸಿದ್ದು ವಿಶೇಷವಾಗಿತ್ತು.