Friday, November 27, 2026
Homeಜಿಲ್ಲೆಮಂಗಳೂರು : ಕೊಂಕಣಿ ಕಲೆಗೆ 300 ತಿಂಗಳ ಸಂಭ್ರಮ; ಡಿ. 6ರಂದು ಮಂಗಳೂರಿನಲ್ಲಿ ‘ದಿ ಗ್ರೇಟ್...

ಮಂಗಳೂರು : ಕೊಂಕಣಿ ಕಲೆಗೆ 300 ತಿಂಗಳ ಸಂಭ್ರಮ; ಡಿ. 6ರಂದು ಮಂಗಳೂರಿನಲ್ಲಿ ‘ದಿ ಗ್ರೇಟ್ ಬಾಯ್ಲಾ ಇಂಟರ್‌ನ್ಯಾಶನಲ್ ಶೋ’…!

ಮಂಗಳೂರು : ಕೊಂಕಣಿ ಕಲೆ, ಸಂಸ್ಕೃತಿ ಹಾಗೂ ಕಲಾವಿದರಿಗೆ ನಿರಂತರ ವೇದಿಕೆ ಕಲ್ಪಿಸುವ ಉದ್ದೇಶದಿಂದ ಮಾಂಡ್ ಸೊಭಾಣ್ ಸಂಸ್ಥೆ ಆರಂಭಿಸಿರುವ ‘ಮ್ಹಯ್ನ್ಯಾಳಿ ಮಾಂಚಿ’ (ತಿಂಗಳ ವೇದಿಕೆ) ಕಾರ್ಯಕ್ರಮವು 300 ತಿಂಗಳ ಮೈಲುಗಲ್ಲು ತಲುಪಿದೆ. ಈ ವಿಶೇಷ ಸಂಭ್ರಮದ ಅಂಗವಾಗಿ ಡಿಸೆಂಬರ್ 6ರಂದು ಸಂಜೆ 6 ಗಂಟೆಗೆ ಮಂಗಳೂರಿನ ಕಲಾಂಗಣದಲ್ಲಿ ‘ದಿ ಗ್ರೇಟ್ ಬಾಯ್ಲಾ ಇಂಟರ್‌ನ್ಯಾಶನಲ್ ಶೋ’ ಆಯೋಜಿಸಲಾಗಿದೆ ಎಂದು ಮಾಂಡ್ ಶೋಭಾಣ್ ಅಧ್ಯಕ್ಷರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

2002ರ ಜನವರಿ 6ರಂದು ಆರಂಭವಾದ ‘ಮ್ಹಯ್ನ್ಯಾಳಿ ಮಾಂಚಿ’ ಕಾರ್ಯಕ್ರಮವು ಕಳೆದ 25 ವರ್ಷಗಳಿಂದ ಪ್ರತಿ ತಿಂಗಳ ಮೊದಲ ಭಾನುವಾರ ನಿರಂತರವಾಗಿ ನಡೆಯುತ್ತಿದೆ. ಕೊಂಕಣಿ ನೃತ್ಯ, ನಾಟಕ, ಸಂಗೀತ ಹಾಗೂ ಜನಪದ ಕಲೆಗಳಿಗೆ ವೇದಿಕೆ ಕಲ್ಪಿಸುತ್ತಾ ಬಂದಿರುವ ಈ ಸರಣಿಯಲ್ಲಿ ವಿವಿಧ ಸಮುದಾಯಗಳ ಕಲಾಪ್ರಕಾರಗಳು ಮತ್ತು ಕೊಂಕಣಿ ಭಾಷೆಯ ವಿಭಿನ್ನ ಪ್ರಭೇದಗಳಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕ್ರೈಸ್ತ, ಜಿಎಸ್‌ಬಿ, ಕುಡ್ಮಿ, ಖಾರ್ವಿ, ಸಿದ್ದಿ, ದಾಲ್ದಿ ಹಾಗೂ ನವಾಯತಿ ಸೇರಿದಂತೆ ವಿವಿಧ ಸಮುದಾಯಗಳ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಈ ವೇದಿಕೆ ಅವಕಾಶ ಕಲ್ಪಿಸಿದೆ. ದೂರದ ಊರುಗಳಿಂದ ಆಗಮಿಸುವ ಕಲಾತಂಡಗಳಿಗೆ ಗೌರವ ಸಂಭಾವನೆ, ಪ್ರಯಾಣ, ವಸತಿ ಹಾಗೂ ಊಟೋಪಚಾರದ ವ್ಯವಸ್ಥೆಯನ್ನೂ ಸಂಸ್ಥೆ ಮಾಡುತ್ತಿದೆ ಎಂದರು.

ಶ್ರೀಲಂಕಾದ ‘ಎಲ್ಲೋ ಬೀಟ್ಸ್’ ತಂಡದಿಂದ ಸಂಗೀತ ಪ್ರದರ್ಶನ

300ನೇ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಬಾಯ್ಲಾ ಹಾಡು ಮತ್ತು ನೃತ್ಯದ ಸಂಭ್ರಮ ನಡೆಯಲಿದೆ. ದುಬಾಯಿಯ ಖ್ಯಾತ ಗಿಟಾರ್ ವಾದಕ ಆಲ್ವಿನ್ ಫೆರ್ನಾಂಡಿಸ್ ಕಾರ್ಯಕ್ರಮವನ್ನು ನಿರ್ದೇಶಿಸಲಿದ್ದು, ಶ್ರೀಲಂಕಾದ ಅಂತರರಾಷ್ಟ್ರೀಯ ಖ್ಯಾತಿಯ ‘ಎಲ್ಲೋ ಬೀಟ್ಸ್’ ತಂಡ ಸಂಗೀತ ರಸದೌತಣ ನೀಡಲಿದೆ. ಹಳೆಯ ಜನಪ್ರಿಯ ಬಾಯ್ಲಾ ಹಾಡುಗಳ ಜತೆಗೆ ಹೊಸ ಹಾಡುಗಳೂ ಪ್ರೇಕ್ಷಕರನ್ನು ರಂಜಿಸಲಿವೆ.

ಇದರೊಂದಿಗೆ ನಾಚ್ ಸೊಭಾಣ್ ಮತ್ತು ಅರ್ಬನ್ ಗ್ರೂವ್ ತಂಡಗಳಿಂದ ವಿಶೇಷ ನೃತ್ಯ ಪ್ರದರ್ಶನ, ಯುವಜನರಿಗಾಗಿ ನೃತ್ಯ ವೇದಿಕೆ ಹಾಗೂ ವೆಂಜ್ ಮಾಡೆಲಿಂಗ್ ಅಕಾಡೆಮಿ ವಿದ್ಯಾರ್ಥಿಗಳಿಂದ ಕೊಂಕಣಿ ಸಾಂಪ್ರದಾಯಿಕ ಉಡುಪುಗಳ ಫ್ಯಾಷನ್ ವಾಕ್ ನಡೆಯಲಿದೆ ಎಂದರು.

ಬೆಂಗಳೂರಿನ ಉದ್ಯಮಿ ಹಾಗೂ ದಾನಿ ಆಸ್ಟಿನ್ ರೋಚ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ.

ಬಾಯ್ಲಾ ಕಲೆಗೆ ಜಾಗತಿಕ ಮನ್ನಣೆ ನೀಡುವ ಪ್ರಯತ್ನ

ಬಾಯ್ಲಾ ಕಲಾಪ್ರಕಾರವನ್ನು ಮತ್ತಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ಮಾಂಡ್ ಸೊಭಾಣ್ ಈ ಹಿಂದೆ ವಿಶ್ವದ ಮೊದಲ ಬಾಯ್ಲಾ ಶೋ, ಬಾಯ್ಲಾ ಕಾರ್ನಿವಲ್ ಹಾಗೂ ಬಾಯ್ಲಾ ಫೆಸ್ಟಿವಲ್ ಸೇರಿದಂತೆ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ಆಲ್ವಿನ್ ಫೆರ್ನಾಂಡಿಸ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ಟ್ಯಾನಿ ಆಲ್ವಾರಿಸ್, ರೊನಾಲ್ಡ್ ಕ್ರಾಸ್ತಾ, ನವೀನ್ ಲೋಬೊ ಹಾಗೂ ಎಲ್ರೊನ್ ರೊಡ್ರಿಗಸ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular