ಮಂಗಳೂರು: ನಗರದ ಬಹುವರ್ಷಗಳ ಬೇಡಿಕೆಯಾಗಿರುವ ತಣ್ಣೀರುಬಾವಿ ಸೇತುವೆ ನಿರ್ಮಾಣ ಕಾಮಗಾರಿ ವೇಳೆ ಶುಕ್ರವಾರ ಬೆಳಗ್ಗೆ ಭೀಕರ ಅವಘಡ ಸಂಭವಿಸಿದೆ.

ಸೇತುವೆಯ ಸ್ಲ್ಯಾಬ್ ಅಳವಡಿಸುವ ಕಾರ್ಯ ನಡೆಯುತ್ತಿದ್ದ ವೇಳೆ ಎರಡು ಕ್ರೇನ್ಗಳ ಪೈಕಿ ಒಂದು ಕ್ರೇನ್ ಏಕಾಏಕಿ ನೀರಿಗೆ ಉರುಳಿ ಬಿದ್ದಿದೆ. ಇದೇ ವೇಳೆ ಅಳವಡಿಸಲಾಗುತ್ತಿದ್ದ ಸ್ಲ್ಯಾಬ್ ಬೋಟ್ ಮೇಲೆ ಬಿದ್ದ ಪರಿಣಾಮ ಬೋಟ್ ಕೂಡ ನೀರಿನಲ್ಲಿ ಮುಳುಗಡೆಯಾಗಿದೆ. ಘಟನೆಯಲ್ಲಿ ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶುಕ್ರವಾರ ಬೆಳಗ್ಗೆ ಸುಮಾರು 9.20ರ ವೇಳೆಗೆ ಈ ಘಟನೆ ಸಂಭವಿಸಿದೆ. ಎರಡು ಕ್ರೇನ್ಗಳ ಸಹಾಯದಿಂದ ಸೇತುವೆಯ ಸ್ಲ್ಯಾಬ್ ಅಳವಡಿಸುವ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಅವಘಡ ನಡೆದಿದೆ.
64 ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿ
ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 64 ಕೋಟಿ ರೂ. ವೆಚ್ಚದಲ್ಲಿ 285 ಮೀಟರ್ ಉದ್ದದ ತಣ್ಣೀರುಬಾವಿ ಸೇತುವೆ ನಿರ್ಮಿಸಲಾಗುತ್ತಿದೆ. ಇದರಲ್ಲಿ 100 ಮೀಟರ್ ಉದ್ದದ ಬೋ-ಸ್ಟ್ರಿಂಗ್ ಮಾದರಿಯ ಸೇತುವೆಯೂ ಒಳಗೊಂಡಿದೆ. ಕಾಮಗಾರಿಯ ಗುತ್ತಿಗೆಯನ್ನು ಮುಗ್ರೋಡಿ ಕನ್ಸ್ಟ್ರಕ್ಷನ್ ಸಂಸ್ಥೆ ವಹಿಸಿಕೊಂಡಿದೆ.
ದಶಕಗಳ ಸಂಚಾರ ಸಮಸ್ಯೆಗೆ ಪರಿಹಾರದ ನಿರೀಕ್ಷೆ
ಮಂಗಳೂರು ನಗರದಿಂದ ಕೇವಲ ಒಂದೂವರೆ ಕಿ.ಮೀ. ದೂರದಲ್ಲಿರುವ ತಣ್ಣೀರುಬಾವಿ ಬೀಚ್ಗೆ ರಸ್ತೆ ಮೂಲಕ ತೆರಳಲು ಸುಮಾರು 15ರಿಂದ 20 ಕಿ.ಮೀ. ಸುತ್ತುವರಿದು ಪ್ರಯಾಣಿಸಬೇಕಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸೇತುವೆ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ.
ಸೇತುವೆ ಪೂರ್ಣಗೊಂಡರೆ ಮಂಗಳೂರು ನಗರದಿಂದ ತಣ್ಣೀರುಬಾವಿ ಬೀಚ್ಗೆ ನೇರ ಸಂಪರ್ಕ ಕಲ್ಪಿಸುವ ನಿರೀಕ್ಷೆಯಿದೆ. ಆದರೆ ಕಾಮಗಾರಿ ವೇಳೆ ಸಂಭವಿಸಿದ ಈ ಅವಘಡ ಆತಂಕ ಮೂಡಿಸಿದೆ.

