Thursday, October 8, 2026
Homeಜಿಲ್ಲೆಮಂಗಳೂರು : ಜ.6ರಿಂದ 10ರವರೆಗೆ ಐದು ದಿನಗಳ ಕಾಲ  ಆಳ್ವಾಸ್ ವಿರಾಸತ್–ನುಡಿಸಿರಿ 2027 ; ಮೂಡುಬಿದಿರೆಯಲ್ಲಿ...

ಮಂಗಳೂರು : ಜ.6ರಿಂದ 10ರವರೆಗೆ ಐದು ದಿನಗಳ ಕಾಲ  ಆಳ್ವಾಸ್ ವಿರಾಸತ್–ನುಡಿಸಿರಿ 2027 ; ಮೂಡುಬಿದಿರೆಯಲ್ಲಿ ಮತ್ತೆ ಮೊಳಗಲಿದೆ ಕನ್ನಡದ ಸಾಂಸ್ಕೃತಿಕ ವೈಭವ.

ಮಂಗಳೂರು : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರತಿಷ್ಠಿತ ಆಳ್ವಾಸ್ ವಿರಾಸತ್ ಹಾಗೂ ಆಳ್ವಾಸ್ ನುಡಿಸಿರಿ–2027 ಈ ಬಾರಿ ಜಂಟಿಯಾಗಿ ನಡೆಯಲಿದ್ದು, ಜನವರಿ 6ರಿಂದ 10ರವರೆಗೆ ಐದು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ರವರು ತಿಳಿಸಿದ್ದಾರೆ.

ಕನ್ನಡ ನಾಡು–ನುಡಿ–ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ–2027 ಜನವರಿ 7ರಂದು ಉದ್ಘಾಟನೆಗೊಂಡು, ಜನವರಿ 9ರಂದು ಸಮಾಪನಗೊಳ್ಳಲಿದೆ. ಈ ಬಾರಿಯ ನುಡಿಸಿರಿಯ ಮುಖ್ಯ ಪರಿಕಲ್ಪನೆ ‘ಕನ್ನಡ ಮನಸ್ಸು : ಭವಿಷ್ಯದ ಕನಸು’ ಆಗಿದ್ದು, ಯುವಜನರನ್ನು ಕೇಂದ್ರವಾಗಿರಿಸಿಕೊಂಡು ಜ್ಞಾನ, ವಿಜ್ಞಾನ ಹಾಗೂ ತಂತ್ರಜ್ಞಾನದ ಸಮರ್ಪಕ ಬಳಕೆಯೊಂದಿಗೆ ಕನ್ನಡದ ಅಸ್ಮಿತೆಯನ್ನು ಉಳಿಸಿಕೊಂಡು ಭವಿಷ್ಯದ ಕರ್ನಾಟಕ ಕಟ್ಟುವ ಆಶಯ ಹೊಂದಿದೆ ಎಂದು ಹೇಳಿದರು.

ನರಹಳ್ಳಿ ಬಾಲಸುಬ್ರಹ್ಮಣ್ಯ ಸರ್ವಾಧ್ಯಕ್ಷ ಖ್ಯಾತ ಕನ್ನಡ ವಿಮರ್ಶಕ ಹಾಗೂ ಸಾಹಿತಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಆಳ್ವಾಸ್ ನುಡಿಸಿರಿ–2027ರ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕನ್ನಡ ವಿಮರ್ಶೆ, ಸಾಹಿತ್ಯ ಹಾಗೂ ಸಂಸ್ಕೃತಿ ಕ್ಷೇತ್ರದಲ್ಲಿ ಹಲವು ಮಹತ್ವದ ಕೃತಿಗಳನ್ನು ರಚಿಸಿರುವ ಅವರಿಗೆ ವಿವಿಧ ಪ್ರಶಸ್ತಿಗಳು ಸಂದಿವೆ. ವಿಶ್ವೇಶ್ವರ ಭಟ್ ಉದ್ಘಾಟಕ ಹಿರಿಯ ಪತ್ರಕರ್ತ, ಅಂಕಣಕಾರ ಹಾಗೂ ವಿಶ್ವವಾಣಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಶ್ರೀ ವಿಶ್ವೇಶ್ವರ ಭಟ್ ಅವರು ನುಡಿಸಿರಿ–2027ರ ಉದ್ಘಾಟಕರಾಗಿದ್ದಾರೆ. ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿರುವ ಅವರು 97ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.

ಅದ್ದೂರಿ ಆಳ್ವಾಸ್ ವಿರಾಸತ್ ಜನವರಿ 6ರಂದು ಆಳ್ವಾಸ್ ವಿರಾಸತ್‌ಗೆ ಭವ್ಯ ಚಾಲನೆ ದೊರೆಯಲಿದ್ದು, ವೇದಘೋಷ, ಭಜನೆ, ಪುಷ್ಪಪಲ್ಲಕ್ಕಿ ಹಾಗೂ ಮಂಗಳವಾದ್ಯಗಳೊಂದಿಗೆ ಸಾಂಸ್ಕೃತಿಕ ರಥದ ಮೆರವಣಿಗೆ ನಡೆಯಲಿದೆ. ಹರಿದ್ವಾರದಿಂದ ಆಗಮಿಸುವ ಗಂಗಾರತಿ ತಂಡ ವಿಶೇಷ ಗಂಗಾರತಿ ನೆರವೇರಿಸಲಿದೆ. ಶಾಸ್ತ್ರೀಯ ಹಾಗೂ ಜನಪದ ಕ್ಷೇತ್ರದ ಇಬ್ಬರು ಸಾಧಕರಿಗೆ ಆಳ್ವಾಸ್ ವಿರಾಸತ್ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜನವರಿ 6ರಿಂದ ಪ್ರತಿದಿನ ಸಂಜೆ 6ರಿಂದ ರಾತ್ರಿ 10ರವರೆಗೆ ಸಂಗೀತ, ನೃತ್ಯ, ಶಾಸ್ತ್ರೀಯ ಹಾಗೂ ಜಾನಪದ ಕಲಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

‘ಹಸಿರು ಸಂವಾದ’ಕ್ಕೆ 50ಕ್ಕೂ ಅಧಿಕ ಗ್ರಾಮಗಳು
ಜನವರಿ 6 ಮತ್ತು 7ರಂದು ‘ಹಸಿರು ಸಂವಾದ’ ರಾಷ್ಟ್ರೀಯ ಸಮ್ಮೇಳನ ನಡೆಯಲಿದ್ದು, ಪಾವಂಜೆ, ನಂದಿನಿ ಹಾಗೂ ಶಾಂಭವಿ ನದಿಗಳ ಜಲಾನಯನ ಪ್ರದೇಶದ 50ಕ್ಕೂ ಅಧಿಕ ಗ್ರಾಮಗಳಲ್ಲಿ ಸುಸ್ಥಿರ ತ್ಯಾಜ್ಯ ನಿರ್ವಹಣೆಯ ಮಾದರಿ ರೂಪಿಸುವ ಯೋಜನೆ ಕೈಗೊಳ್ಳಲಾಗಿದೆ. 800ಕ್ಕೂ ಅಧಿಕ ಮಂದಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಯುವಜನರಿಗೆ ವಿಶೇಷ ಕಾರ್ಯಕ್ರಮಗಳು.

ರಾಜ್ಯಮಟ್ಟದ ಭಾರತ್ ಸ್ಕೌಟ್ಸ್‌ ಆ್ಯಂಡ್ ಗೈಡ್ಸ್ ಸಾಂಸ್ಕೃತಿಕ ಜಂಬೂರಿಯಲ್ಲಿ 5,000ಕ್ಕೂ ಅಧಿಕ ಸೈಟ್ಸ್, ಗೈಡ್ಸ್, ರೋವರ್ಸ್ ಹಾಗೂ ರೇಂಜರ್ಸ್ ಭಾಗವಹಿಸಲಿದ್ದಾರೆ. 800 ವಿದ್ಯಾರ್ಥಿ ಕಲಾವಿದರಿಗೆ ಉಚಿತ ತರಬೇತಿ ಕಾರ್ಯಾಗಾರವೂ ನಡೆಯಲಿದೆ.

ಜನವರಿ 8ರಂದು ಆಳ್ವಾಸ್ ವಿದ್ಯಾರ್ಥಿಸಿರಿ ಹಾಗೂ ಜನವರಿ 9ರಂದು ಮೊದಲ ಬಾರಿಗೆ ಆಳ್ವಾಸ್ ಯುವಸಿರಿ ಆಯೋಜಿಸಲಾಗುತ್ತಿದೆ. ಕೃಷಿ, ವಿಜ್ಞಾನ, ಆಹಾರ, ಪುಸ್ತಕ ಮತ್ತು ಕಲಾ ಮೇಳ ನುಡಿಸಿರಿ–ವಿರಾಸತ್‌ನ ಅಂಗವಾಗಿ ಕೃಷಿಮೇಳ, ವಿಜ್ಞಾನ ಮೇಳ, ಆಹಾರ ಮೇಳ, ಪುಸ್ತಕ ಮೇಳ ಹಾಗೂ ಕಲಾ ಮೇಳ ನಡೆಯಲಿವೆ. ಕೃಷಿ ತಂತ್ರಜ್ಞಾನ, ವೈಜ್ಞಾನಿಕ ಆವಿಷ್ಕಾರಗಳು, ಕರ್ನಾಟಕದ ಸಾಂಪ್ರದಾಯಿಕ ಆಹಾರ, ಸಾಹಿತ್ಯ ಕೃತಿಗಳು ಹಾಗೂ ವಿವಿಧ ಕಲಾ ಪ್ರಕಾರಗಳು ಒಂದೇ ವೇದಿಕೆಯಲ್ಲಿ ಅನಾವರಣಗೊಳ್ಳಲಿವೆ.

ಪ್ರತಿನಿಧಿ ನೋಂದಣಿ.

ಐದು ದಿನಗಳ ಕಾರ್ಯಕ್ರಮದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಲು ₹500 ಶುಲ್ಕ ನಿಗದಿಪಡಿಸಲಾಗಿದೆ. ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಜ್ಞಾನಪರ ಕಾರ್ಯಕ್ರಮಗಳ ಈ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳು ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ನುಡಿಸಿರಿ–ವಿರಾಸತ್ 2027ರ ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular