Saturday, November 21, 2026
Homeಜಿಲ್ಲೆಮಂಗಳೂರು : ಬೆಂಗಳೂರಿನಲ್ಲಿ ನ.28ರಂದು ಶ್ರೀ ನಾರಾಯಣಗುರು ಮಹಾಒಕ್ಕೂಟ-ಕರ್ನಾಟಕ ಉದ್ಘಾಟನಾ ಸಮಾರಂಭ

ಮಂಗಳೂರು : ಬೆಂಗಳೂರಿನಲ್ಲಿ ನ.28ರಂದು ಶ್ರೀ ನಾರಾಯಣಗುರು ಮಹಾಒಕ್ಕೂಟ-ಕರ್ನಾಟಕ ಉದ್ಘಾಟನಾ ಸಮಾರಂಭ

ಮಂಗಳೂರು : ಈಡಿಗ, ಬಿಲ್ಲವ, ದೀವರು, ನಾಮಧಾರಿ, ನಾಡರ್, ತಿಯ್ಯ ಸೇರಿದಂತೆ 26 ಉಪಜಾತಿಗಳನ್ನು ಒಳಗೊಂಡಿರುವ ಶ್ರೀ ನಾರಾಯಣಗುರು ಮಹಾಒಕ್ಕೂಟ-ಕರ್ನಾಟಕ (ರಿ.) ಸಂಘಟನೆಯ ಉದ್ಘಾಟನಾ ಸಮಾರಂಭವು ನವೆಂಬರ್ 28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ MS ಕೋಟ್ಯಾನ್ ರವರು ತಿಳಿಸಿದ್ದಾರೆ.

ಬೆಳಿಗ್ಗೆ 10 ಗಂಟೆಗೆ ಅರಮನೆ ಮೈದಾನದ ವೈಟ್ ಪೆಟಲ್ಸ್, ಗೇಟ್ ನಂ.3ರಲ್ಲಿ ನಡೆಯಲಿರುವ ಈ ಸಮಾರಂಭಕ್ಕೆ ವಿವಿಧ ಮಠಗಳ ಸ್ವಾಮೀಜಿಗಳು, ರಾಜಕೀಯ ನಾಯಕರು, ಮಾಜಿ ಸಚಿವರು, ಶಾಸಕರು, ಸಂಸದರು ಹಾಗೂ ಸಮಾಜದ ಗಣ್ಯರು ಭಾಗವಹಿಸಲಿದ್ದಾರೆ.

ಶಿವಗಿರಿ ಮಠದ ಶ್ರೀ ನಾರಾಯಣ ಗುರು ಧರ್ಮ ಸಂಘಂನ ಅಧ್ಯಕ್ಷರಾದ ಶ್ರೀ ಶ್ರೀ ಶ್ರೀ ಸ್ವಾಮಿ ಋತಂಬರಾನಂದ ಅವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ.

ಅರ್ಯ ಈಡಿಗ ಮಹಾಸಂಸ್ಥಾನದ ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿಗಳು, ದತ್ತಾಶ್ರಮದ ಅವಧೂತ ಶ್ರೀ ವಿನಯ್ ಗುರೂಜಿ, ಶ್ರೀಕ್ಷೇತ್ರ ಕಾರ್ತಿಕೇಯ ಪೀಠದ ಶ್ರೀ ಯೋಗೇಂದ್ರ ಅವಧೂತರು, ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು, ಶ್ರೀ ರೇಣುಕಾನಂದ ಸ್ವಾಮೀಜಿಗಳು ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಹಾಗೂ ಧಾರ್ಮಿಕ ಗಣ್ಯರು ಉಪಸ್ಥಿತರಿರಲಿದ್ದಾರೆ.

ಜನಾರ್ದನ ಪೂಜಾರಿ, ಕಾಗೋಡು ತಿಮ್ಮಪ್ಪ ಸೇರಿದಂತೆ ಗಣ್ಯರ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ಮಾಜಿ ಸಭಾಧ್ಯಕ್ಷ ಹಾಗೂ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಲೋಕಸಭಾ ಸದಸ್ಯ ಎಚ್.ಜಿ. ರಾಮುಲು ಅವರು ಘನ ಉಪಸ್ಥಿತಿ ವಹಿಸಲಿದ್ದಾರೆ.

ಶ್ರೀ ನಾರಾಯಣಗುರು ಮಹಾಒಕ್ಕೂಟ-ಕರ್ನಾಟಕದ ಅಧ್ಯಕ್ಷರಾದ ಜೆ.ಪಿ. ಸುಧಾಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ರಾಜಕೀಯ ಗಣ್ಯರು ಮುಖ್ಯ ಅತಿಥಿಗಳು

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ಕಲಬುರಗಿ ವಿಧಾನ ಪರಿಷತ್ ಸದಸ್ಯ ಜಗದೇವ್ ಗುತ್ತೇದಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವು ಶಾಸಕರು, ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.

ಇದಲ್ಲದೆ ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ್, ಹಾಲಪ್ಪ ಹರತಾಳು, ಶಿವಾನಂದ ನಾಯ್ಕ, ಆರ್.ಎನ್. ನಾಯ್ಕ, ಕುಮಾರ್ ಬಂಗಾರಪ್ಪ, ವಿನಯ್ ಕುಮಾರ್ ಸೊರಕೆ, ಜಯಮಾಲಾ ಸೇರಿದಂತೆ ಹಲವು ಮಾಜಿ ಶಾಸಕರು, ಸಚಿವರು ಹಾಗೂ ಸಮಾಜದ ಪ್ರಮುಖರು ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

26 ಉಪಜಾತಿಗಳ ಒಗ್ಗಟ್ಟಿಗೆ ಮಹತ್ವದ ವೇದಿಕೆ

ಈಡಿಗ, ಬಿಲ್ಲವ, ದೀವರು, ನಾಮಧಾರಿ, ನಾಡರ್, ತಿಯ್ಯ ಸೇರಿದಂತೆ 26 ಉಪಜಾತಿಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಸಮಾಜದ ಸಂಘಟನೆ, ಒಗ್ಗಟ್ಟು, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಒಗ್ಗಟ್ಟಿನ ವೇದಿಕೆ ನಿರ್ಮಿಸುವ ಉದ್ದೇಶದಿಂದ ಮಹಾಒಕ್ಕೂಟ ರಚನೆಯಾಗಿದ್ದು, ಉದ್ಘಾಟನಾ ಸಮಾರಂಭವು ಸಮಾಜದ ಒಗ್ಗಟ್ಟಿನ ದೃಷ್ಟಿಯಿಂದ ಮಹತ್ವ ಪಡೆದಿದೆ.

ಪತ್ರಿಕಾಗೋಷ್ಟಿಯಲ್ಲಿ ಸದಾನಂದ ಪೂಜಾರಿ, ಕಿರಣ್ ಕೋಡಿಕಲ್,ಭಾಸ್ಕರ್ ಕೋಟ್ಯಾನ್, ಅನಿಲ್ ಕಾವೂರ್, ನಿಶಾಂತ್ ಪೂಜಾರಿ, ,ಅನಿಲ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular