Sunday, September 13, 2026
Homeಜಿಲ್ಲೆಮಂಗಳೂರು : ದಕ್ಷಿಣ ಕನ್ನಡದಲ್ಲಿ ಉಚಿತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಿಶ್ವವಿದ್ಯಾಲಯ ಮತ್ತು ಉಚಿತ ಆಸ್ಪತ್ರೆ ಶೀಘ್ರ...

ಮಂಗಳೂರು : ದಕ್ಷಿಣ ಕನ್ನಡದಲ್ಲಿ ಉಚಿತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಿಶ್ವವಿದ್ಯಾಲಯ ಮತ್ತು ಉಚಿತ ಆಸ್ಪತ್ರೆ ಶೀಘ್ರ : ಸದ್ಗುರು ಶ್ರೀ ಮಧುಸೂದನ ಸಾಯಿ.

ಮಂಗಳೂರು : ಬಂಟ್ವಾಳ ತಾಲೂಕಿನ ಮಡಿಯಾಲ ಗ್ರಾಮದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ಕಂಪ್ಯೂಟರ್ ಸೈನ್ಸ್‌ಗೆ ಒತ್ತು ನೀಡುವ ಉನ್ನತ ಶಿಕ್ಷಣ ಕೇಂದ್ರ ಇದೇ ನವೆಂಬರ್‌ನಲ್ಲಿ ಕಾರ್ಯಾರಂಭವಾಗಲಿದೆ. 2027ರ ಜೂನ್‌ನಿಂದ ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗುವುದು ಎಂದು ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್’ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದರು.

ಮಂಗಳೂರಿನಲ್ಲಿ ಶನಿವಾರ ನಡೆದ ‘ದಿವ್ಯ ಸಂಜೆ’ ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿ ಉಲ್ಲಾಸ್ ಕಾಮತ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಲೋಕಸೇವಾ ವೃಂದದ ಸಂಸ್ಥಾಪಕ ಮಡಿಯಾಲ ನಾರಾಯಣ ಭಟ್ಟರ ಜನ್ಮಶತಮಾನೋತ್ಸವದ ಹಿನ್ನೆಲೆಯಲ್ಲಿ ಅವರ ಹುಟ್ಟೂರಿನಲ್ಲಿ ಈ ಮಹತ್ವದ ಶಿಕ್ಷಣ ಉಪಕ್ರಮ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ಮಂಗಳೂರು ಈಗಾಗಲೇ ವಿವಿಧ ಶಿಕ್ಷಣ ಕೋರ್ಸ್‌ಗಳಿಗೆ ಪ್ರಸಿದ್ಧವಾಗಿದ್ದು, ಇದಕ್ಕೆ ಮತ್ತಷ್ಟು ಹೊಸ ಆಯಾಮ ನೀಡುವ ಉದ್ದೇಶದಿಂದ ಎಐ, ಮಷೀನ್ ಲರ್ನಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.

ಸನಾತನ ಜ್ಞಾನ ಮತ್ತು ಆಧುನಿಕ ತಂತ್ರಜ್ಞಾನ ಎಐ ಅಥವಾ ಯಾವುದೇ ಅತ್ಯಾಧುನಿಕ ತಂತ್ರಜ್ಞಾನ ಸನಾತನ ಧರ್ಮಕ್ಕೆ ಹೊರತಾದುದಲ್ಲ. ಅಧ್ಯಾತ್ಮದಲ್ಲಿ ಸಾಧನೆ ಮಾಡಿದ ನಮ್ಮ ಋಷಿಗಳು ಏಕಕಾಲದಲ್ಲಿ ವಿಜ್ಞಾನಿಗಳೂ ಆಗಿದ್ದರು. ಜ್ಞಾನಕ್ಕೆ ಯಾವುದೇ ಭೇದವಿಲ್ಲ ಎಂಬುದನ್ನು ತಾಯಿ ಸರಸ್ವತಿಯ ಪರಿಕಲ್ಪನೆ ಸಾರುತ್ತದೆ ಎಂದು ಸದ್ಗುರು ಹೇಳಿದರು.

ಸನಾತನ ಧರ್ಮ ಪುರಾತನ ಮೌಲ್ಯ ಮಾತ್ರವಲ್ಲ, ಅದು ನಿತ್ಯನೂತನವೂ ಆಗಿದೆ. ವಿಶ್ವದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಅರಿತು ಮುಂದಿನ ದಿನಗಳಲ್ಲಿ ಹೇಗೆ ಸ್ಪಂದಿಸಬೇಕು ಎಂಬುದನ್ನು ನಾವು ಚಿಂತಿಸಬೇಕು. ಉಚಿತ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಅತ್ಯಾಧುನಿಕ ಜ್ಞಾನದಿಂದ ವಂಚಿತರಾಗಬಾರದು ಎಂದರು.

ಮಂಗಳೂರಿಗೆ ಕೊಡುಗೆ ನೀಡಲು ಬಂದಿದ್ದೇನೆ ‘ಮಂಗಳೂರಿಗೆ ಬರಲು ಏಕೆ ಇಷ್ಟು ತಡವಾಯಿತು?’ ಎಂಬ ಪ್ರಶ್ನೆಗೆ ಉತ್ತರಿಸಿದ ಸದ್ಗುರು, ಮಂಗಳೂರಿನ ಜನರಿಗೆ ತಾನು ಏನು ಕೊಡುಗೆ ನೀಡಬಹುದು ಎಂಬುದನ್ನು ಯೋಚಿಸುತ್ತಿದ್ದೆ. ಇದೀಗ ಮಡಿಯಾಲ ನಾರಾಯಣ ಭಟ್ಟರ ಸ್ಮರಣಾರ್ಥ ಉನ್ನತ ಶಿಕ್ಷಣ ಆರಂಭಿಸುವ ಅವಕಾಶ ದೊರೆತಿದ್ದು, ಈ ಕೊಡುಗೆಯೊಂದಿಗೆ ಮಂಗಳೂರಿಗೆ ಬಂದಿದ್ದೇನೆ ಎಂದು ಹೇಳಿದರು.

ಸಿಎಸ್‌ಆರ್‌ ನಿಧಿ ಸಮರ್ಪಕ ಬಳಕೆಗೆ ಸಲಹೆ ಸಿಎಸ್‌ಆರ್‌ ನಿಧಿಯನ್ನು ಸಮರ್ಪಕವಾಗಿ ಸೇವಾ ಚಟುವಟಿಕೆಗಳಿಗೆ ಬಳಸಬೇಕು ಎಂದು ಸದ್ಗುರು ಅಭಿಪ್ರಾಯಪಟ್ಟರು. ಸರ್ಕಾರಕ್ಕೆ ತೆರಿಗೆಯ ಮೇಲೆ ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಲಾಭದ ಮೇಲೆ ಹಕ್ಕು ಇರುವಂತೆ ಸೇವಾ ಚಟುವಟಿಕೆ ನಡೆಸುವ ಸಂಸ್ಥೆಗಳಿಗೂ ಸಿಎಸ್‌ಆರ್‌ ನಿಧಿಯ ಮೇಲೆ ಹಕ್ಕು ಇರಬೇಕು ಎಂದು ಹೇಳಿದರು.

ಮಂಗಳೂರಿನಲ್ಲಿ 50 ಹಾಸಿಗೆಗಳ ಉಚಿತ ಆಸ್ಪತ್ರೆ ಮಂಗಳೂರು ನಗರದಲ್ಲಿ ಶೀಘ್ರದಲ್ಲೇ 50 ಹಾಸಿಗೆ ಸಾಮರ್ಥ್ಯದ ಉಚಿತ ಆಸ್ಪತ್ರೆ ಆರಂಭಿಸಲಾಗುವುದು ಎಂದು ಸದ್ಗುರು ಘೋಷಿಸಿದರು. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಇಂತಹ ಆಸ್ಪತ್ರೆಗಳನ್ನು ಆರಂಭಿಸುವ ಯೋಜನೆಯಿದ್ದು, ಆಸ್ಪತ್ರೆಯ ರೂಪುರೇಷೆ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ವಿವರ ನೀಡಲಾಗುವುದು ಎಂದರು. ರಾಜ್ಯದ ಪ್ರಸ್ತುತ 15 ಜಿಲ್ಲೆಗಳಲ್ಲಿ ತಮ್ಮ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಿಗೂ ಶಿಕ್ಷಣ ಸಂಸ್ಥೆಗಳನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

5 ಕೋಟಿ ಮಕ್ಕಳಿಗೆ ಪೌಷ್ಟಿಕ ಆಹಾರದ ಗುರಿ ‘ಸಾಯಿಶ್ಯೂರ್’ ಯೋಜನೆಯ ಮೂಲಕ ಪ್ರಸ್ತುತ ಒಂದು ಕೋಟಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲ ರಾಜ್ಯಗಳ ಐದು ಕೋಟಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸುವ ಗುರಿ ಹೊಂದಲಾಗಿದೆ ಎಂದು ಸದ್ಗುರು ಹೇಳಿದರು.

ಮೋಹನ್ ಆಳ್ವಗೆ ಕರ್ನಾಟಕ ಪರಿವರ್ತಕ ಪ್ರಶಸ್ತಿ ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್’ ವತಿಯಿಂದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರಿಗೆ ‘ಕರ್ನಾಟಕ ಪರಿವರ್ತಕ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೋಹನ್ ಆಳ್ವ, ಮುಂದಿನ ಆಳ್ವಾಸ್ ವಿರಾಸತ್ ಜನವರಿ 7ರಿಂದ 10ರವರೆಗೆ ನಡೆಯಲಿದ್ದು, ಸದ್ಗುರು ಶ್ರೀ ಮಧುಸೂದನ ಸಾಯಿ ಅವರನ್ನು ಉದ್ಘಾಟನೆಗೆ ಆಹ್ವಾನಿಸಿದರು. ಮುದ್ದೇನಹಳ್ಳಿಗೆ ಭೇಟಿ ನೀಡಿ ಅಲ್ಲಿನ ಗೋಶಾಲೆ, ಸಾಯಿಶ್ಯೂರ್ ಕಾರ್ಖಾನೆ ಮತ್ತು ಆಸ್ಪತ್ರೆಯ ಸೇವಾ ಕಾರ್ಯಗಳನ್ನು ಕಂಡಿದ್ದಾಗಿ ಹೇಳಿದ ಅವರು, ಅಲ್ಲಿನ ಸೇವಾ ಚಟುವಟಿಕೆಗಳು ಪವಾಡದಂತೆ ಭಾಸವಾಗುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಡಾ. ಎಂ. ಮೋಹನ್ ಆಳ್ವ, ಕಲ್ಲಡ್ಕ ಪ್ರಭಾಕರ್ ಭಟ್, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಭಟ್, ಕ್ಯಾಂಪ್ಕೋ ಅಧ್ಯಕ್ಷ ಸತೀಶ್‌ಚಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular