ಹೊಸದಿಲ್ಲಿ : ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಭಾರತ–ರಷ್ಯಾ ನಡುವಿನ ವ್ಯಾಪಾರವನ್ನು 2030ರ ವೇಳೆಗೆ ₹10 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿ ಸೇರಿದಂತೆ ವ್ಯಾಪಾರ, ಇಂಧನ, ರಕ್ಷಣಾ ಕ್ಷೇತ್ರಗಳ ಸಹಕಾರ ಕುರಿತು ನಾಯಕರು ಚರ್ಚಿಸಿದರು.
ಪ್ರಮುಖ ಅಂಶಗಳು :
ಭಾರತ–ರಷ್ಯಾ ವ್ಯಾಪಾರ ₹10 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿ.
110 ದಿನಗಳಲ್ಲಿ ಮೋದಿ–ಪುಟಿನ್ 2ನೇ ದ್ವಿಪಕ್ಷೀಯ ಮಾತುಕತೆ.
ಉಕ್ರೇನ್ ಯುದ್ಧಕ್ಕೆ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳುವಂತೆ ಮೋದಿ ಕರೆ.
ಇಂಧನ ಭದ್ರತೆ, ರಕ್ಷಣಾ ಸಹಕಾರದ ಕುರಿತು ಚರ್ಚೆ.
ಬಾಹ್ಯಾಕಾಶ ಕ್ಷೇತ್ರದಲ್ಲೂ ಸಹಕಾರ ವೃದ್ಧಿಗೆ ಮಾತುಕತೆ.
ರಷ್ಯಾದಲ್ಲಿ ನಡೆಯಲಿರುವ 24ನೇ ವಾರ್ಷಿಕ ಶೃಂಗಸಭೆಗೆ ಮೋದಿಗೆ ಪುಟಿನ್ ಆಹ್ವಾನ.
ಪುಟಿನ್‌ಗೆ ರಷ್ಯನ್ ಭಾಷೆಯ ‘ತಿರುಕ್ಕುರಳ್’ ಕೃತಿ ಉಡುಗೊರೆಯಾಗಿ ನೀಡಿದ ಮೋದಿ.
ಪಶ್ಚಿಮ ಏಷ್ಯಾ ಬಿಕ್ಕಟ್ಟು : ಇರಾನ್ ಅಧ್ಯಕ್ಷರೊಂದಿಗೆ ಮೋದಿ ಚರ್ಚೆ :
ಬ್ರಿಕ್ಸ್ ಶೃಂಗದ ನೇಪಥ್ಯದಲ್ಲಿ ಪ್ರಧಾನಿ ಮೋದಿ ಅವರು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರೊಂದಿಗೂ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಪಶ್ಚಿಮ ಏಷ್ಯಾದ ಸಂಘರ್ಷವನ್ನು ಕಡಿಮೆ ಮಾಡಲು ರಾಜತಾಂತ್ರಿಕ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಮೋದಿ ಕರೆ ನೀಡಿದರು. ವ್ಯಾಪಾರ ಹಾಗೂ ಆರ್ಥಿಕ ಸಹಕಾರ ವೃದ್ಧಿಸುವ ಬಗ್ಗೆಯೂ ಚರ್ಚೆ ನಡೆಯಿತು.
ಬ್ರಿಕ್ಸ್ ಶೃಂಗಕ್ಕೆ ದಿಲ್ಲಿಯಲ್ಲಿ ಭಾರಿ ಭದ್ರತೆ.
ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. 15,000 ಪೊಲೀಸ್ ಸಿಬ್ಬಂದಿ, ಅರೆಸೇನಾ ಪಡೆಗಳ 200 ಕಂಪನಿಗಳು ಹಾಗೂ 500ಕ್ಕೂ ಅಧಿಕ ಸಿಸಿಟಿವಿಗಳ ಮೂಲಕ ನಿಗಾ ವಹಿಸಲಾಗಿದೆ. ಸಂಚಾರ ನಿಯಂತ್ರಣಕ್ಕಾಗಿ ಸುಮಾರು 4,800 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ..
ದೀಪಾಲಂಕಾರದಿಂದ ಕಂಗೊಳಿಸಿದ ರಾಜಧಾನಿ.
ಬ್ರಿಕ್ಸ್ ಶೃಂಗಸಭೆಗಾಗಿ ಲ್ಯುಟೆನ್ಸ್ ದಿಲ್ಲಿ ವಿಶೇಷವಾಗಿ ಸಿಂಗಾರಗೊಂಡಿದೆ. ಪ್ರಮುಖ ರಸ್ತೆಗಳು ಹಾಗೂ ಪ್ರದೇಶಗಳಲ್ಲಿ ಬ್ರಿಕ್ಸ್‌ಗೆ ಸಂಬಂಧಿಸಿದ ಪೋಸ್ಟರ್‌ಗಳು, ಫಲಕಗಳು, ಹೂವು ಮತ್ತು ದೀಪಾಲಂಕಾರಗಳು ಗಮನ ಸೆಳೆಯುತ್ತಿವೆ. ರಸ್ತೆಗಳುದ್ದಕ್ಕೂ 15,000ಕ್ಕೂ ಅಧಿಕ ಅಲಂಕಾರಿಕ ಸಸ್ಯಗಳನ್ನು ನೆಡಲಾಗಿದೆ.

