ಪ್ಯಾರಿಸ್ : ಜೀವನವೆಚ್ಚದ ಏರಿಕೆ, ಇಂಧನ ಬೆಲೆ ಹೆಚ್ಚಳ, ಸರಕಾರಿ ಶಾಲೆಗಳಲ್ಲಿನ ಮೂಲಸೌಕರ್ಯ ಕೊರತೆ ಹಾಗೂ ಸಾರ್ವಜನಿಕ ಸೇವೆಗಳ ಗುಣಮಟ್ಟ ಕುಸಿತವನ್ನು ವಿರೋಧಿಸಿ ಫ್ರಾನ್ಸ್ನಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿವೆ. ಹಲವು ಪ್ರದೇಶಗಳಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸ್ ವಾಹನಗಳ ಮೇಲೆ ದಾಳಿ, ಅಂಗಡಿಗಳ ದರೋಡೆ ಹಾಗೂ ಸರಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿವೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.
ಗೃಹ ಸಚಿವರ ಮಾಹಿತಿಯ ಪ್ರಕಾರ, ಪ್ರತಿಭಟನೆಗೆ ಸಂಬಂಧಿಸಿದಂತೆ 1,800ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಪ್ಯಾರಿಸ್ ಪ್ರದೇಶದಲ್ಲೇ 855 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಹೃದಯಾಘಾತದಿಂದ ಓರ್ವ ವ್ಯಕ್ತಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
5.5 ಲಕ್ಷಕ್ಕೂ ಹೆಚ್ಚು ಮಂದಿ ಬೀದಿಗೆ
ಸರಕಾರಿ ಅಂದಾಜಿನ ಪ್ರಕಾರ, ದೇಶಾದ್ಯಂತ ಸುಮಾರು 5.5 ಲಕ್ಷ ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ಯಾರಿಸ್ನಲ್ಲಿ ಸುಮಾರು 1.1 ಲಕ್ಷ ಜನ ಸೇರಿದ್ದರು. ಆದರೆ ಪ್ರತಿಭಟನೆಯ ಆಯೋಜಕರಾದ ಸಿಜಿಟಿ ಕಾರ್ಮಿಕ ಸಂಘಟನೆ, ಒಟ್ಟು ಭಾಗವಹಿಸಿದವರ ಸಂಖ್ಯೆ ಸುಮಾರು 8 ಲಕ್ಷ ಎಂದು ಹೇಳಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳಿಂದ ಆರಂಭವಾದ ಪ್ರತಿಭಟನೆಗೆ ಕಾರ್ಮಿಕ ಸಂಘಟನೆಗಳು ಹಾಗೂ 2018ರ ‘ಯೆಲ್ಲೊ ವೆಸ್ಟ್’ ಚಳವಳಿಯ ಬೆಂಬಲಿಗರು ಕೈಜೋಡಿಸಿದ್ದಾರೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಮೂಲಸೌಕರ್ಯ ಸಮಸ್ಯೆ ಹಾಗೂ ಶಿಕ್ಷಣ ವ್ಯವಸ್ಥೆಯ ಮೇಲಿನ ಅಸಮಾಧಾನ ಪ್ರತಿಭಟನೆಗೆ ಪ್ರಮುಖ ಕಾರಣಗಳಾಗಿವೆ. ಕಾರ್ಮಿಕರು, ನಿವೃತ್ತರು ಹಾಗೂ ಇತರ ಸಾರ್ವಜನಿಕ ವಲಯದ ಸಿಬ್ಬಂದಿಯೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಐತಿಹಾಸಿಕ ನಗರಸಭೆಗೆ ಬೆಂಕಿ
ಮಧ್ಯ ಫ್ರಾನ್ಸ್ನ ಲಿಮೋಜ್ ನಗರದಲ್ಲಿರುವ 19ನೇ ಶತಮಾನದ ಐತಿಹಾಸಿಕ ನಗರಸಭೆಯ ಕಟ್ಟಡಕ್ಕೆ ಬೆಂಕಿ ಹಚ್ಚಲಾಗಿದೆ. ಘಟನೆಯಲ್ಲಿ ಕಟ್ಟಡದ ಚಾವಣಿ ಹಾಗೂ ಗೋಪುರದ ಒಂದು ಭಾಗ ಕುಸಿದಿದೆ ಎಂದು ವರದಿಯಾಗಿದೆ. ಪ್ರತಿಭಟನಾಕಾರರು ಕಟ್ಟಡದೊಳಗೆ ನುಗ್ಗಿ ಬೆಂಕಿ ಹಚ್ಚಿದ ಬಳಿಕ ಸುತ್ತಮುತ್ತಲಿನ ವ್ಯಾಪಾರ ಮಳಿಗೆಗಳಲ್ಲಿಯೂ ದರೋಡೆ ನಡೆದಿದೆ ಎನ್ನಲಾಗಿದೆ.
ನಾಲ್ವರು ಪೊಲೀಸ್ ಸಿಬ್ಬಂದಿಗೆ ಗಂಭೀರ ಗಾಯಗಳಾಗಿದ್ದು, ನಾಲ್ಕು ಪೊಲೀಸ್ ವಾಹನಗಳು ಹಾನಿಗೊಳಗಾಗಿವೆ. ಲಿಯಾನ್ನಲ್ಲಿ ಪ್ರವಾಸೋದ್ಯಮ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಮಾರ್ಸೇಯ್ನಲ್ಲಿ ನಗರಸಭೆಗೆ ನುಗ್ಗಿ ಹಾನಿ ಮಾಡಲಾಗಿದ್ದು, ಬೋರ್ಡೊದಲ್ಲಿ ಪ್ರಿಫೆಕ್ಟ್ ನಿವಾಸವನ್ನು ದರೋಡೆ ಮಾಡಲಾಗಿದೆ. ಪ್ಯಾರಿಸ್ನಲ್ಲಿಯೂ ಗ್ಯಾಲರೀಸ್ ಲಫಾಯೆಟ್ ಮಳಿಗೆಗೆ ನುಗ್ಗಲು ಯತ್ನ, ಲಾಕೋಸ್ಟ್ ಮಳಿಗೆ ಹಾಗೂ ಎಸ್ಎಫ್ಆರ್ ಮೊಬೈಲ್ ಅಂಗಡಿಯಲ್ಲಿ ದರೋಡೆ ಸೇರಿದಂತೆ ಹಲವು ಘಟನೆಗಳು ನಡೆದಿವೆ.
ಹಿಂಸಾಚಾರಕ್ಕೆ ಪ್ರಧಾನಿ ಖಂಡನೆ
ಪ್ರಧಾನಿ ಸೆಬಾಸ್ಟಿಯನ್ ಅವರು ಹಿಂಸಾಚಾರವನ್ನು ಖಂಡಿಸಿದ್ದು, ಸರಕಾರಿ ವ್ಯವಸ್ಥೆಯಲ್ಲಿನ ಕೆಲವು ಗುಂಪುಗಳು ತೀವ್ರ ಎಡಪಂಥೀಯ ಸಿದ್ಧಾಂತಕ್ಕೆ ಬದ್ಧವಾಗಿವೆ ಎಂದು ಆರೋಪಿಸಿದ್ದಾರೆ. ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ದಾಳಿ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಇದೇ ವೇಳೆ, ಭದ್ರತಾ ಪಡೆಗಳು ಪ್ರತಿಭಟನೆಯನ್ನು ನಿಯಂತ್ರಿಸಲು ಬಳಸಿದ ಕ್ರಮಗಳ ಬಗ್ಗೆಯೂ ಚರ್ಚೆ ಆರಂಭವಾಗಿದೆ. ವಿಶೇಷವಾಗಿ ಪೊಲೀಸರ ಸ್ಪನ್ ಗ್ರೆನೇಡ್ ಬಳಕೆಗೆ ಸಂಬಂಧಿಸಿದಂತೆ ತನಿಖೆ ನಡೆಯಬೇಕೆಂಬ ಆಗ್ರಹ ಕೇಳಿಬಂದಿದೆ.
ವಲಸೆ ನೀತಿಯ ವಿರುದ್ಧ ಜೆ.ಡಿ. ವ್ಯಾನ್ಸ್ ಟೀಕೆ
ಫ್ರಾನ್ಸ್ನ ಹಿಂಸಾತ್ಮಕ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ದೇಶದಲ್ಲಿನ ಅಶಾಂತಿಗೆ ಅನಿಯಂತ್ರಿತ ವಲಸೆ ಹಾಗೂ ವಲಸಿಗರ ಏಕೀಕರಣದಲ್ಲಿನ ವೈಫಲ್ಯ ಕಾರಣ ಎಂದು ಆರೋಪಿಸಿದ್ದಾರೆ. ಯುರೋಪ್ ರಾಷ್ಟ್ರಗಳ ವಲಸೆ ನೀತಿಯನ್ನು ಟೀಕಿಸಿರುವ ಅವರು, ಈ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿರುವ ನಿಲುವನ್ನೂ ಉಲ್ಲೇಖಿಸಿದ್ದಾರೆ.
ಆದರೆ ಫ್ರಾನ್ಸ್ನ ಪ್ರತಿಭಟನೆಗೆ ಜೀವನವೆಚ್ಚ, ಇಂಧನ ಬೆಲೆ, ಶಿಕ್ಷಣ ಹಾಗೂ ಸಾರ್ವಜನಿಕ ಸೇವೆಗಳ ಕುರಿತ ಅಸಮಾಧಾನವೂ ಪ್ರಮುಖ ಕಾರಣಗಳಾಗಿ ವರದಿಯಾಗಿವೆ. ದೇಶಾದ್ಯಂತ ಮುಂದುವರಿದಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದ್ದು, ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಮುಂದುವರಿದಿದೆ.

