Tuesday, August 18, 2026
Homeರಾಜಕೀಯನವದೆಹಲಿ : ಬಿಜೆಪಿಗೀಗ ನವೀನ ರೂಪ : 65 ಪದಾಧಿಕಾರಿಗಳಲ್ಲಿ 51 ಹೊಸ ಮುಖ.

ನವದೆಹಲಿ : ಬಿಜೆಪಿಗೀಗ ನವೀನ ರೂಪ : 65 ಪದಾಧಿಕಾರಿಗಳಲ್ಲಿ 51 ಹೊಸ ಮುಖ.

ನವದೆಹಲಿ : 2029ರ ಲೋಕಸಭಾ ಚುನಾವಣೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಬಿಜೆಪಿ ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದು, ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಸೋಮವಾರ ತಮ್ಮ ನೂತನ ತಂಡವನ್ನು ಘೋಷಿಸಿದ್ದಾರೆ.

ಯುವಕರು, ಮಹಿಳೆಯರು ಹಾಗೂ ಅನುಭವಿಗಳಿಗೆ ಆದ್ಯತೆ ನೀಡಿರುವ ಹೊಸ ತಂಡದಲ್ಲಿ ಒಟ್ಟು 65 ಪದಾಧಿಕಾರಿಗಳಿದ್ದು, 51 ಮಂದಿ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗಿದೆ.
13 ರಾಷ್ಟ್ರೀಯ ಉಪಾಧ್ಯಕ್ಷರ ಪೈಕಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ ಸೇರಿದಂತೆ ಹಲವು ಹಿರಿಯ ನಾಯಕರನ್ನು ಮುಂದುವರಿಸಲಾಗಿದೆ.

ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಆರ್‌ಎಸ್ಎಸ್‌ ನಾಯಕ ರಾಮ್ ಮಾಧವ್ ಹಾಗೂ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರಿಗೆ ಪ್ರಮುಖ ಜವಾಬ್ದಾರಿ ನೀಡಲಾಗಿದೆ.

ಹೊಸ ತಂಡದಲ್ಲಿ 10 ಮಹಿಳೆಯರು ಹಾಗೂ 6 ಅಲ್ಪಸಂಖ್ಯಾತರಿಗೆ ಸ್ಥಾನ ಕಲ್ಪಿಸಲಾಗಿದೆ. ಅನುಭವ ಮತ್ತು ಯುವ ನಾಯಕತ್ವದ ನಡುವೆ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನವನ್ನು ಬಿಜೆಪಿ ಮಾಡಿದೆ.

ಕರ್ನಾಟಕದ ಇಬ್ಬರಿಗೆ ಪ್ರಮುಖ ಸ್ಥಾನ.
ನಿತಿನ್ ನವೀನ್ ಅವರ ನೂತನ ತಂಡದಲ್ಲಿ ಕರ್ನಾಟಕದ ಇಬ್ಬರಿಗೆ ಸ್ಥಾನ ದೊರೆತಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ತಮ್ಮ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇತ್ತೀಚೆಗಷ್ಟೇ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಪ್ರೊ. ಎಂ. ನಾಗರಾಜ್ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸಂತೋಷ್ ಅವರ ಮುಂದುವರಿಕೆ ಬಿಜೆಪಿ ರಾಷ್ಟ್ರೀಯ ಸಂಘಟನೆಯಲ್ಲಿ ಅವರ ಪ್ರಭಾವ ಮುಂದುವರಿದಿರುವುದನ್ನು ಸೂಚಿಸಿದರೆ, ನಾಗರಾಜ್ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ನೀಡಿರುವುದು ಕರ್ನಾಟಕದ ರಾಜಕೀಯ ಲೆಕ್ಕಾಚಾರಗಳಲ್ಲೂ ಮಹತ್ವ ಪಡೆದಿದೆ.

ತೇಜಸ್ವಿ ಸೂರ್ಯ, ಅಮಿತ್ ಮಾಳವೀಯಗೆ ಬದಲಾವಣೆ
ಪಕ್ಷದ ವಿವಿಧ ಮೋರ್ಚಾಗಳಲ್ಲೂ ಬದಲಾವಣೆ ಮಾಡಲಾಗಿದೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರನ್ನು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸ್ಥಾನದಿಂದ ಬದಲಾಯಿಸಲಾಗಿದೆ.
ಕರ್ನಾಟಕದ ಮಾಜಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೈಬಿಡಲಾಗಿದೆ. ಅದೇ ರೀತಿ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥರಾಗಿದ್ದ ಅಮಿತ್ ಮಾಳವೀಯ ಅವರಿಗೂ ಬದಲಾವಣೆ ಮಾಡಲಾಗಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದತ್ತ ಕುತೂಹಲ ರಾಷ್ಟ್ರೀಯ ಪದಾಧಿಕಾರಿಗಳ ನೇಮಕ ಪೂರ್ಣಗೊಂಡ ಬೆನ್ನಲ್ಲೇ ರಾಜ್ಯ ಬಿಜೆಪಿಯ ಮುಂದಿನ ಅಧ್ಯಕ್ಷ ಸ್ಥಾನದ ಬಗ್ಗೆ ಕುತೂಹಲ ಹೆಚ್ಚಾಗಿದೆ. ರಾಷ್ಟ್ರೀಯ ಸಂಘಟನೆಯಲ್ಲಿ ಕರ್ನಾಟಕದ ಇಬ್ಬರಿಗೆ ಪ್ರಮುಖ ಸ್ಥಾನ ದೊರೆತಿರುವ ಹಿನ್ನೆಲೆಯಲ್ಲಿ ರಾಜ್ಯ ಘಟಕದ ಪುನರ್‌ರಚನೆಯ ಮೇಲೂ ಬಿಜೆಪಿ ವರಿಷ್ಠರು ಗಮನಹರಿಸಲಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ.

ಸಂಪುಟ ಪುನಾರಚನೆಗೂ ವೇದಿಕೆ ಸಜ್ಜು?

ಬಿಜೆಪಿ ಸಂಘಟನಾ ಪುನಾರಚನೆಯ ಬೆನ್ನಲ್ಲೇ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಬಗ್ಗೆಯೂ ಚರ್ಚೆ ಆರಂಭವಾಗಿದೆ. ಪಿಯೂಷ್ ಗೋಯಲ್ ಅವರಿಗೆ ಪಕ್ಷದ ಖಜಾಂಚಿ ಹುದ್ದೆ ನೀಡಿರುವುದು ಕೇಂದ್ರ ಸಚಿವ ಸಂಪುಟದಲ್ಲಿ ಮುಂದಿನ ದಿನಗಳಲ್ಲಿ ಬದಲಾವಣೆ ಸಾಧ್ಯತೆಗಳ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular