Monday, July 6, 2026
Homeರಾಜ್ಯಮಡಿಕೇರಿ : ಮಲ್ಲಳ್ಳಿ ಜಲಪಾತದಲ್ಲಿ ತಪ್ಪಿದ ದುರಂತ : ನೀರಿನ ಸೆಳೆತಕ್ಕೆ ಸಿಲುಕಿದ್ದ ಆಂಧ್ರದ ಇಬ್ಬರು...

ಮಡಿಕೇರಿ : ಮಲ್ಲಳ್ಳಿ ಜಲಪಾತದಲ್ಲಿ ತಪ್ಪಿದ ದುರಂತ : ನೀರಿನ ಸೆಳೆತಕ್ಕೆ ಸಿಲುಕಿದ್ದ ಆಂಧ್ರದ ಇಬ್ಬರು ವಿದ್ಯಾರ್ಥಿಗಳ ರಕ್ಷಣೆ.

ಕೊಡಗು : ಸೋಮವಾರಪೇಟೆ ತಾಲೂಕಿನ ಪ್ರಸಿದ್ಧ ಮಲ್ಲಳ್ಳಿ ಜಲಪಾತದಲ್ಲಿ ಸಂಭವಿಸಬಹುದಾಗಿದ್ದ ಭಾರೀ ದುರಂತವನ್ನು ಸ್ಥಳೀಯ ಗ್ರಾಮಸ್ಥರು ಹಾಗೂ ಅಗ್ನಿಶಾಮಕ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆ ತಪ್ಪಿಸಿದೆ.

ಆಂಧ್ರಪ್ರದೇಶದಿಂದ ಪ್ರವಾಸಕ್ಕೆ ಬಂದಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನೀರಿನ ಸೆಳೆತಕ್ಕೆ ಸಿಲುಕಿ ಸುಮಾರು ಒಂದು ಗಂಟೆ ಬಂಡೆಯನ್ನು ಹಿಡಿದು ಜೀವ ಉಳಿಸಿಕೊಳ್ಳಲು ಪರದಾಡಿದ ಘಟನೆ ಸೋಮವಾರ ನಡೆದಿದೆ.

ರಕ್ಷಣೆಗೊಂಡ ವಿದ್ಯಾರ್ಥಿಗಳನ್ನು ಗಣೇಶ್ ನಾಯಕ್ (21) ಹಾಗೂ ಸಂತೋಷ್ ಕುಮಾರ್ (23) ಎಂದು ಗುರುತಿಸಲಾಗಿದೆ. ಸ್ನೇಹಿತರೊಂದಿಗೆ ಜಲಪಾತ ವೀಕ್ಷಣೆಗೆ ಬಂದಿದ್ದ ಅವರು ಸುರಕ್ಷತಾ ಬೇಲಿಯನ್ನು ಲೆಕ್ಕಿಸದೆ ಹೊಳೆಗೆ ಇಳಿದಿದ್ದರು. ಇದೇ ವೇಳೆ ಮೇಲ್ಭಾಗದ ಜಲವಿದ್ಯುತ್ ಘಟಕದಿಂದ ನೀರು ಹರಿಸಲಾಗಿದ್ದು, ಸೈರನ್ ಮೊಳಗಿಸಿದ್ದರೂ ವಿದ್ಯಾರ್ಥಿಗಳಿಗೆ ಎಚ್ಚರಿಕೆ ಕೇಳಿಸಲಿಲ್ಲ ಎನ್ನಲಾಗಿದೆ.

ನೀರಿನ ಹರಿವು ಏಕಾಏಕಿ ಹೆಚ್ಚಾಗಿ ಇಬ್ಬರೂ ಸೆಳೆತಕ್ಕೆ ಸಿಲುಕಿದಾಗ ಸಮೀಪದ ಬಂಡೆಯನ್ನು ಹಿಡಿದುಕೊಂಡು ಸಹಾಯಕ್ಕಾಗಿ ಕಾಯುತ್ತಿದ್ದರು. ಬಳಿಕ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿ ನೀರಿನ ಹರಿವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.

ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹಗ್ಗ ಸೇರಿದಂತೆ ರಕ್ಷಣಾ ಉಪಕರಣಗಳ ಸಹಾಯದಿಂದ ಇಬ್ಬರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ರಕ್ಷಿಸಿದರು.

ರಕ್ಷಣಾ ಕಾರ್ಯಾಚರಣೆಯಲ್ಲಿ ಪವನ್ ಕುಮಾರ್, ಪಿ.ಎಸ್. ನಾಗೇಶ್, ಲತೇಶ್ ಕುಮಾರ್, ಪ್ರಶಾಂತ್ ಹಾಗೂ ವಿನಿ ಕುಮಾರ್ ಪ್ರಮುಖ ಪಾತ್ರವಹಿಸಿದರು. ಬಳಿಕ ಇಬ್ಬರನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular