Sunday, August 16, 2026
Homeಜಿಲ್ಲೆಚಿಕ್ಕಮಗಳೂರು : ಮುಳ್ಳಯ್ಯನಗಿರಿಯಲ್ಲಿ ಉರುಳಿಗೆ ಸಿಲುಕಿದ ಹುಲಿ; ಗ್ರಾಮಸ್ಥರು, ಪ್ರವಾಸಿಗರಲ್ಲಿ ಆತಂಕ.

ಚಿಕ್ಕಮಗಳೂರು : ಮುಳ್ಳಯ್ಯನಗಿರಿಯಲ್ಲಿ ಉರುಳಿಗೆ ಸಿಲುಕಿದ ಹುಲಿ; ಗ್ರಾಮಸ್ಥರು, ಪ್ರವಾಸಿಗರಲ್ಲಿ ಆತಂಕ.

ಚಿಕ್ಕಮಗಳೂರು : ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಉರುಳಿಗೆ ಸಿಲುಕಿ ಗಾಯಗೊಂಡಿರುವ ಹುಲಿಯೊಂದು ಕಳೆದ ನಾಲ್ಕೈದು ದಿನಗಳಿಂದ ಅರಣ್ಯ ಪ್ರದೇಶ ಹಾಗೂ ತೋಟಗಳ ಸುತ್ತಮುತ್ತ ಸಂಚರಿಸುತ್ತಿದ್ದು, ಪ್ರವಾಸಿಗರು ಮತ್ತು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಸೊಂಟಕ್ಕೆ ಉರುಳು ಸಿಲುಕಿಕೊಂಡಿರುವ ಸ್ಥಿತಿಯಲ್ಲೇ ಹುಲಿ ಸಂಚರಿಸುತ್ತಿರುವುದು ಕಂಡುಬಂದಿದ್ದು, ಸಚಿವ ಕೆ.ಜೆ. ಜಾರ್ಜ್ ಒಡೆತನದ ಏಳುನೂರ್ ಖಾನ್ ಎಸ್ಟೇಟ್ ಸಮೀಪ ಈ ಘಟನೆ ಬೆಳಕಿಗೆ ಬಂದಿದೆ. ಗಾಯದ ನೋವಿನ ನಡುವೆಯೂ ಹುಲಿ ಜಿಂಕೆ ಹಾಗೂ ಕಡವೆಯನ್ನು ಬೇಟೆಯಾಡಿರುವ ಲಕ್ಷಣಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಕಳೆದ ಮೂರು-ನಾಲ್ಕು ದಿನಗಳಿಂದ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದ್ದು, ವಿವಿಧೆಡೆ ಕ್ಯಾಮೆರಾಗಳನ್ನು ಅಳವಡಿಸಿ ಅದರ ಚಲನವಲನದ ಮೇಲೆ ನಿಗಾ ಇಡಲಾಗಿದೆ. ಆದರೆ ಇನ್ನೂ ಹುಲಿ ಅಧಿಕಾರಿಗಳ ಕೈಗೆ ಸಿಕ್ಕಿಲ್ಲ.
ಪಂಡರವಳ್ಳಿ, ಕೊಳಗಾಮೆ ಹಾಗೂ ಏಳುನೂರ್ ಖಾನ್ ಭಾಗದ ಗ್ರಾಮಸ್ಥರು ಮತ್ತು ತೋಟದ ಕಾರ್ಮಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ತಾತ್ಕಾಲಿಕವಾಗಿ ತೋಟಗಳಿಗೆ ಕೆಲಸಕ್ಕೆ ತೆರಳದಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.

ಹುಲಿ ಸೆರೆಗೆ ಅರಣ್ಯಾಧಿಕಾರಿಗಳು ಹರಸಾಹಸ ಮುಂದುವರಿಸಿದ್ದು, ಮುಳ್ಳಯ್ಯನಗಿರಿ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರು ಎಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular