ಶಿವಮೊಗ್ಗ : ಶರಾವತಿ ಹಿನ್ನೀರಿನ ನೀರಿನ ಮಟ್ಟ ಗಣನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಸಿರುಮಕ್ಕಿ ಲಾಂಚ್ ಸೇವೆಯನ್ನು ಇಂದಿನಿಂದ ಸ್ಥಗಿತಗೊಳಿಸಲಾಗಿದೆ.
ಮಳೆಯ ಕೊರತೆಯಿಂದ ಹಿನ್ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಲಾಂಚ್ ಸಂಚಾರ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಮುಪ್ಪಾನೆ ಲಾಂಚ್ ಸೇವೆ ಸ್ಥಗಿತಗೊಂಡಿದ್ದು, ಇದೀಗ ಹಸಿರುಮಕ್ಕಿ ಲಾಂಚ್ ಸೇವೆಯೂ ಬಂದ್ ಆಗಿದೆ.
ಸಾಗರ ಮತ್ತು ಕೊಲ್ಲೂರು ನಡುವಿನ ಪ್ರಮುಖ ಸಂಪರ್ಕ ಮಾರ್ಗವಾಗಿದ್ದ ಹಸಿರುಮಕ್ಕಿ ಲಾಂಚ್, ಹೊಸನಗರ ತಾಲೂಕಿನ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿತ್ತು. ಈ ಮಾರ್ಗವನ್ನು ಪ್ರತಿದಿನ ಸಾವಿರಾರು ಜನರು ಬಳಸುತ್ತಿದ್ದರು.
ಲಾಂಚ್ ಸೇವೆ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರು ಇದೀಗ ಹೊಸನಗರ–ನಗರ–ನಿಟ್ಟೂರು ಮಾರ್ಗದ ಮೂಲಕ ಸಂಚಾರ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.

