ಕಲಬುರಗಿ : ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ದುತ್ತರಗಾಂವ್ ಗ್ರಾಮದಲ್ಲಿ 21 ವರ್ಷದ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಆಕಾಶ್ ತಂದೆ ಅಮೃತ ಮಾಂಗ್ ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಆಕಾಶ್ ಅದೇ ಗ್ರಾಮದ ಯುವತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದನು. ಬಳಿಕ ಯುವತಿಯ ಮದುವೆ ಬೇರೊಬ್ಬ ಯುವಕನೊಂದಿಗೆ ನಡೆದಿದ್ದರೂ, ಆಕಾಶ್ ಆಕೆಯೊಂದಿಗೆ ಸಂಪರ್ಕ ಮುಂದುವರಿಸಿದ್ದ ಎನ್ನಲಾಗಿದೆ. ಈ ವಿಚಾರ ಈ ಹಿಂದೆ ಪೊಲೀಸ್ ಠಾಣೆ ಮೆಟ್ಟಿಲನ್ನೂ ಹತ್ತಿತ್ತು. ನಿನ್ನೆ ಗ್ರಾಮದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಆಕಾಶ್ನ ಶವ ಪತ್ತೆಯಾಗಿದೆ. ಆದರೆ, ಯುವತಿಯ ಕಡೆಯವರೇ ತನ್ನ ಮಗನನ್ನು ಕೊಲೆ ಮಾಡಿ ಬಳಿಕ ನೇಣು ಹಾಕಿದ್ದಾರೆ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ.
ಪೋಷಕರ ದೂರಿನ ಮೇರೆಗೆ ಆಳಂದ ತಾಲೂಕಿನ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾವಿನ ನಿಖರ ಕಾರಣ ಹಾಗೂ ಘಟನೆಯ ಸತ್ಯಾಸತ್ಯತೆ ತನಿಖೆ ಬಳಿಕ ತಿಳಿಯಬೇಕಿದೆ.

