ಉಳ್ಳಾಲ : ಉಳ್ಳಾಲ ತಾಲ್ಲೂಕಿನ ಪ್ರಥಮ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಚರಣ್ ರಾಜ್ ಕೆ. ಶೆಟ್ಟಿ ಹಾಗೂ ಪ್ರಕೃತಿ ಸಿ. ಶೆಟ್ಟಿ ದಂಪತಿಗೆ ಗುರುವಾರ ನಡೆದ ಸಮಾರಂಭದಲ್ಲಿ “ಅಬ್ಬಕ್ಕ ಸಾಧನಾ ಪ್ರಶಸ್ತಿ” ಪ್ರದಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, “ಒಮ್ಮೆ ವಿಮಾನ ಪ್ರಯಾಣಿಸುವ ವೇಳೆ ಅಲ್ಲಿನ ಸಿಬ್ಬಂದಿಗಳು ನನ್ನನ್ನು ಗುರುತಿಸಿ ಎಲ್ಲರಿಗೂ ಪರಿಚಯಿಸಿದ ಕ್ಷಣ ಹಾಗೂ ದೊರೆತ ಚಪ್ಪಾಳೆಗಳು ನನ್ನ ಜೀವನದ ಅತ್ಯಂತ ಸಂತಸದ ಕ್ಷಣಗಳಾಗಿವೆ. ಇಂದು ಸಾಧನೆ ಮಾಡಿದ ಇಬ್ಬರು ಪೈಲಟ್‌ಗಳನ್ನು ಸನ್ಮಾನಿಸಲಾಗುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ” ಎಂದು ಹೇಳಿದರು.
ಪ್ರಕೃತಿ ಸಿ. ಶೆಟ್ಟಿ ಮಾತನಾಡಿ, “ವಿಮಾನ ಹಾರಾಟ ಆರಂಭಿಸಿದ ವೇಳೆ ನನಗೆ ಯಾವುದೇ ಭಯವಾಗಲಿಲ್ಲ. ಜೀವನದಲ್ಲಿ ಶ್ರದ್ಧೆ ಮತ್ತು ಆತ್ಮವಿಶ್ವಾಸ ಇದ್ದರೆ ಏನನ್ನೂ ಸಾಧಿಸಬಹುದು. ಯುಎಇಯಲ್ಲಿ ನನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ್ದೇನೆ. 6000 ಗಂಟೆಗಳ ಹಾರಾಟದ ಅನುಭವ ನನ್ನ ಜೀವನದ ಮಹತ್ವದ ಸಾಧನೆ. ತಂದೆ-ತಾಯಿಯ ಪ್ರೇರಣೆಯೇ ನನ್ನನ್ನು ಈ ಮಟ್ಟಕ್ಕೆ ತಲುಪಿಸಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ಅಧ್ಯಕ್ಷ ರವಿ ಉಚ್ಚಿಲ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ನಿವೃತ್ತ ಶಿಕ್ಷಕಿ ಪಾವನ, ಉದ್ಯಮಿ ಹರಿದಾಸ್ ಮಾಡೂರು, ಭುವನಾ ಶಶಿಧರ್, ಭರತ್ ರಾಜ್ ಸನಿಲ್, ಶಶಿಧರ್ ಪೊಯ್ಯತ್ತಬೈಲ್, ವಜ್ರ ಗುಜರನ್ ಹಾಗೂ ಗಣೇಶ್ ತಲಪಾಡಿ ಉಪಸ್ಥಿತರಿದ್ದರು.


