ಮಂಗಳೂರು : ವಿಶ್ವದ ಅಗ್ರಗಣ್ಯ ಆಧ್ಯಾತ್ಮಿಕ ನೇತಾರರೂ ಕೋಟ್ಯಾಂತರ ಭಕ್ತರ ಆರಾಧ್ಯಮಾತೆಯೂ ಆಗಿರುವ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಮಂಗಳೂರು ಆಗಮನದ ಹಿನ್ನೆಲೆ ನಡೆಯಲಿರುವ “ಬ್ರಹ್ಮಸ್ಥಾನಂ ಮಹೋತ್ಸವ – ಅಮೃತಸಂಗಮ 2026” ಕಾರ್ಯಕ್ರಮದ ಪ್ರಚಾರಾರ್ಥ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ಜರುಗಿತು.



ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ ವೇದವ್ಯಾಸ್ ಕಾಮತ್ ಪೋಸ್ಟರ್ ಅನಾವರಣಗೊಳಿಸಿ ಮಾತನಾಡಿ, “ಮಾತಾ ಅಮೃತಾನಂದಮಯಿ ದೇವಿಯವರು ಹಿಂದಿನ ಕಾರ್ಯಕ್ರಮದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಭಕ್ತರನ್ನು ಆಲಂಗಿಸಿ ಆಶೀರ್ವದಿಸಿದ್ದರು. ಏಳು ವರ್ಷಗಳ ಬಳಿಕ ಕರ್ನಾಟಕದಲ್ಲಿ ನಡೆಯುತ್ತಿರುವ ಏಕೈಕ ಕಾರ್ಯಕ್ರಮ ಇದಾಗಿರುವುದರಿಂದ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ” ಎಂದು ಹೇಳಿದರು. “ಅಮ್ಮನವರ ದರ್ಶನಕ್ಕಾಗಿ ಬರುವ ಭಕ್ತರು ಹಾಗೂ ಸೇವಾರ್ಥಿಗಳ ಅನುಕೂಲಕ್ಕಾಗಿ 10 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈ ಪವಿತ್ರ ಸೇವೆಯಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ” ಎಂದ ಅವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಮ್ಮನವರ ಅನುಗ್ರಹಕ್ಕೆ ಪಾತ್ರರಾಗುವಂತೆ ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯ ಶ್ರೀ ಐವನ್ ಡಿ’ಸೋಜ ಮಾತನಾಡಿ, “ಅಮ್ಮನವರ ಪಾದಸ್ಪರ್ಶದಿಂದ ಈ ಭಾಗದಲ್ಲಿ ಸಕಾರಾತ್ಮಕ ಪರಿವರ್ತನೆ ಆಗಿದೆ. ಅಮ್ಮನವರ ಮಾನವೀಯ ಸೇವಾ ಯೋಜನೆಗಳು ಜನರಿಗೆ ಬಹಳ ಉಪಯುಕ್ತವಾಗಿವೆ. ಉಚಿತ ಹೃದಯ ಶಸ್ತ್ರಚಿಕಿತ್ಸಾ ಶಿಬಿರ ಅನೇಕ ಕುಟುಂಬಗಳಿಗೆ ಆಶಾಕಿರಣವಾಗಿದೆ” ಎಂದು ಹೇಳಿದರು.
ಮೇ 28 ಮತ್ತು 29ರಂದು ಅಮೃತ ವಿದ್ಯಾಲಯಂ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ರಾಜಕೀಯ ಭೇದ ಮರೆತು ಸಂಪೂರ್ಣ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಡಾ. ಜೀವರಾಜ್ ಸೊರಕೆ, ಡಾ. ವೈ. ಸನತ್ ಹೆಗ್ಡೆ, ಡಾ. ವಸಂತ ಕುಮಾರ್ ಪೆರ್ಲ, ಅಧ್ಯಕ್ಷರಾದ ಸುರೇಶ್ ಅಮೀನ್, ಚೇತನ್ ಬೆಂಗ್ರೆ, ಮುರಳೀಧರ ಶೆಟ್ಟಿ, ಗಣೇಶ್ ಹೊಸಬೆಟ್ಟು ಹಾಗೂ ವಿ.ಎಲ್. ರೇಗೋ ಉಪಸ್ಥಿತರಿದ್ದರು.
ಡಾ. ದೇವದಾಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಗೂ ಅಮ್ಮನ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


