ಮಂಗಳೂರು : ಬೇಸಿಗೆಯ ಬಿಸಿಲ ತಾಪ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಾಣಿ-ಪಕ್ಷಿಗಳ ರಕ್ಷಣೆಗೆ ಮಂಗಳೂರಿನ ಪಿಲಿಕುಳ ನಿಸರ್ಗಧಾಮ ಜೈವಿಕ ಉದ್ಯಾನದಲ್ಲಿ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಉದ್ಯಾನದಲ್ಲಿ ಪ್ರಾಣಿ-ಪಕ್ಷಿಗಳಿಗೆ ಫ್ಯಾನ್, ಕೂಲರ್ ಹಾಗೂ ಸ್ಪ್ರಿಂಕ್ಲರ್ ವ್ಯವಸ್ಥೆ ಮಾಡಲಾಗಿದ್ದು, ಗೂಡುಗಳ ಮೇಲ್ಭಾಗದಲ್ಲಿ ನೀರು ಸಿಂಪಡಿಸುವ ಮೂಲಕ ತಾಪಮಾನ ಕಡಿಮೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಬಿಸಿಲ ತಾಪಕ್ಕೆ ಹೆಚ್ಚು ಒಳಗಾಗುವ ಪ್ರಾಣಿ-ಪಕ್ಷಿಗಳಿಗೆ ಆದ್ಯತೆ ನೀಡಲಾಗಿದೆ.
ಪ್ರಾಣಿಗಳಿಗೆ ಸಮರ್ಪಕ ಕುಡಿಯುವ ನೀರಿನ ಪೂರೈಕೆ ಜೊತೆಗೆ, ಅವುಗಳ ಓಡಾಟದ ಪ್ರದೇಶಗಳಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಿ ನೀರು ಸಂಗ್ರಹಿಸಲಾಗುತ್ತಿದೆ. ಈ ಮೂಲಕ ಪ್ರಾಣಿಗಳು ನೀರಿನಲ್ಲಿ ಮಿಂದೆದು ತಂಪಾಗಿಕೊಳ್ಳಲು ಅನುಕೂಲ ಮಾಡಲಾಗಿದೆ. ಕೆಲ ಪ್ರಾಣಿಗಳ ಮೈಗೆ ಪೈಪ್ ಮೂಲಕ ನೀರು ಹಾಯಿಸುವ ವ್ಯವಸ್ಥೆಯನ್ನೂ ಜಾರಿಗೊಳಿಸಲಾಗಿದೆ. ಅರಣ್ಯ ವಾತಾವರಣದಲ್ಲಿರುವುದರಿಂದ ಹೆಚ್ಚಿನ ಬಿಸಿಲಿನ ತೀವ್ರತೆ ಇಲ್ಲದಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಈ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೇಸಿಗೆಯ ಸಮಯದಲ್ಲಿ ಪ್ರಾಣಿಗಳ ಆರೋಗ್ಯದ ಮೇಲೂ ವಿಶೇಷ ನಿಗಾ ವಹಿಸಲಾಗಿದೆ. ಸುಮಾರು 82 ಹೆಕ್ಟೇರ್ ವ್ಯಾಪ್ತಿಯಲ್ಲಿ ವಿಸ್ತಾರಗೊಂಡಿರುವ ಈ ಉದ್ಯಾನಕ್ಕೆ ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ “ಮೇಜರ್ ಝೂ” ಮಾನ್ಯತೆ ಲಭಿಸಿದ್ದು, ಇಲ್ಲಿ 900ಕ್ಕೂ ಹೆಚ್ಚು ಪ್ರಾಣಿ, ಹಾವು ಮತ್ತು ಪಕ್ಷಿಗಳು ವಾಸವಾಗಿವೆ.
ಇದಲ್ಲದೆ, ಮಂಗಳೂರು ಸಿಟಿ ಪೊಲೀಸ್ ಶ್ವಾನದಳಕ್ಕೂ ಬಿಸಿಲ ತಾಪದಿಂದ ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ. ಶ್ವಾನಗಳ ಕೊಠಡಿಗಳಲ್ಲಿ ಫ್ಯಾನ್ ಹಾಗೂ ಕೂಲರ್ ಅಳವಡಿಸಲಾಗಿದ್ದು, ಕಡಿಮೆ ಬಿಸಿಲಿರುವ ಸಮಯದಲ್ಲಿ ವಾಕಿಂಗ್ ವ್ಯವಸ್ಥೆ ಹಾಗೂ ಆಹಾರದಲ್ಲಿ ಬದಲಾವಣೆ ಮೂಲಕ ಆರೋಗ್ಯ ಕಾಪಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


