ಮಂಡ್ಯ: ಭ್ರೂಣಲಿಂಗ ಪತ್ತೆಗಾಗಿ ಕಾನೂನುಬಾಹಿರವಾಗಿ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ನಡೆಸಿದ ಪ್ರಕರಣದಲ್ಲಿ ಮೂವರು ವೈದ್ಯರನ್ನು ಬಂಧಿಸಲಾಗಿದೆ. ಕೆ.ಆರ್. ಪೇಟೆ ಪಟ್ಟಣದ ಚೇತನ ಮೆಟರ್ನಿಟಿ ಸೆಂಟರ್ನ ಡಾ. ದಿವ್ಯಾ ಚೇತನ, ನಾವಿ ಡಯಾಗ್ನಸ್ಟಿಕ್ ಸೆಂಟರ್ನ ಡಾ. ಹರ್ಷಿತ್ ಹಾಗೂ ಕುಶಾಲ್ ಡಯಾಗ್ನಸ್ಟಿಕ್ ಸೆಂಟರ್ನ ಡಾ. ಹರೀಶ್ ಬಂಧಿತರಾಗಿದ್ದಾರೆ.
ಇನ್ನೊಂದೆಡೆ, ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಸರ್ಕಾರಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಪ್ರಿಯಾಂಕಾಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಈ ಪ್ರಕರಣದಲ್ಲಿ ಕೆ.ಆರ್. ಪೇಟೆ ಪಟ್ಟಣ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಒಟ್ಟು 17 ಆರೋಪಿಗಳ ವಿರುದ್ಧ ಪ್ರತ್ಯೇಕವಾಗಿ 12 ಎಫ್ಐಆರ್ಗಳು ದಾಖಲಾಗಿವೆ. ಆರೋಪಿಗಳಲ್ಲಿ ಸರ್ಕಾರಿ ವೈದ್ಯೆ, ಮೂವರು ಖಾಸಗಿ ವೈದ್ಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಆಶಾ ಕಾರ್ಯಕರ್ತೆ ಹಾಗೂ ಕೆಲವು ಖಾಸಗಿ ವ್ಯಕ್ತಿಗಳು ಸೇರಿದ್ದಾರೆ.
ಲೋಕಾಯುಕ್ತ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ದಾಳಿ ನಡೆಸಿದ್ದು, ಕೆ.ಆರ್. ಪೇಟೆಯ ಎರಡು ಡಯಾಗ್ನೋಸ್ಟಿಕ್ ಕೇಂದ್ರಗಳಲ್ಲಿ ಭ್ರೂಣಲಿಂಗ ಪತ್ತೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ತನಿಖೆಯ ಪ್ರಕಾರ, ನಾವಿ ಡಯಾಗ್ನಸ್ಟಿಕ್ ಸೆಂಟರ್ನಲ್ಲಿ 2024ರಲ್ಲಿ 19 ಮತ್ತು 2025ರಲ್ಲಿ 5 ಸೇರಿ ಒಟ್ಟು 24 ಬಾಲಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ವೇಳೆ ಕುಶಾಲ್ ಡಯಾಗ್ನಸ್ಟಿಕ್ ಸೆಂಟರ್ನಲ್ಲಿ 7 ಬಾಲಗರ್ಭಿಣಿಯರಿಗೆ ಸ್ಕ್ಯಾನಿಂಗ್ ನಡೆಸಿರುವುದಾಗಿ ತಿಳಿದುಬಂದಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.


